TV9 Kannada Digital Live: ಅಮೆರಿಕವೆಂಬ ವಿದೇಶಿ ಶಕ್ತಿಯನ್ನು ಓಡಿಸಿದ ತಾಲಿಬಾನಿಗಳದ್ದು ನಿಜವಾದ ದೇಶಭಕ್ತಿ; ಸುಧೀಂದ್ರ ಕುಲಕರ್ಣಿ

ಕೇವಲ ಭೂತಕಾಲದ ಚುಂಗು ಹಿಡಿದು ಯೋಚಿಸುವುದಕ್ಕಿಂತ ವರ್ತಮಾನದ ಬದಲಾವಣೆಯಿಂದ ಆಶಾವಾದ ಮೂಡಿಸಲಿ ಎಂದು ನಾವು ಬಯಸಬಹುದಷ್ಟೇ ಎಂದು ಅವರು ಆಶಿಸಿದರು. ಆದರೆ ಎಲ್ಲವನ್ನೂ ನಿರ್ಧರಿಸುವುದು ಅಪ್ಘಾನಿಸ್ತಾನದ ಸಾರ್ವಜನಿಕರೇ ಹೊರತೂ ನಾವಲ್ಲ ಎಂಬುದನ್ನೂ ತಮ್ಮ ಮಾತಿಗೆ ಸೇರಿಸುವುದನ್ನು ಸುಧೀಂದ್ರ ಕುಲಕರ್ಣಿ ಮರೆಯಲಿಲ್ಲ.

TV9 Kannada Digital Live: ಅಮೆರಿಕವೆಂಬ ವಿದೇಶಿ ಶಕ್ತಿಯನ್ನು ಓಡಿಸಿದ ತಾಲಿಬಾನಿಗಳದ್ದು ನಿಜವಾದ ದೇಶಭಕ್ತಿ; ಸುಧೀಂದ್ರ ಕುಲಕರ್ಣಿ
ಸುಧೀಂದ್ರ ಕುಲಕರ್ಣಿ
Follow us
| Updated By: ಡಾ. ಭಾಸ್ಕರ ಹೆಗಡೆ

Updated on:Aug 17, 2021 | 7:09 PM

ದೇಶವೊಂದರ ಮೇಲೆ ವಿದೇಶಿ ಶಕ್ತಿಗಳು ಆಕ್ರಮಣ ನಡೆಸಿ ‘ರಾಷ್ಟ್ರಭಕ್ತಿ ಎಂದರೆ ಏನು? ಯಾರು ರಾಷ್ಟ್ರಭಕ್ತರು?’ ಎಂಬ ಪ್ರಶ್ನೆ ಎದುರಾದಾಗ ವಿದೇಶಿ ಆಕ್ರಮಣಕಾರಿಗಳನ್ನು ಹೊರಗಟ್ಟುವುದು ರಾಷ್ಟ್ರಭಕ್ತಿ ಎಂದು ಯಾರೂ ಸಹ ಉತ್ತರಿಸುತ್ತಾರೆ. ಇದೇ ಅಳತೆಗೋಲನ್ನು ಅಫ್ಘಾನಿಸ್ತಾನಕ್ಕೆ ಅಳವಡಿಸಿದಾಗ ತಾಲಿಬಾನಿಗಳು ದೇಶಭಕ್ತರು ಎಂದು ಅರಿವಾಗುತ್ತದೆ ಎಂದು ಹಿರಿಯ ಪತ್ರಕರ್ತ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ. ಟಿವಿ9 ಕನ್ನಡ ಡಿಜಿಟಲ್ ಲೈವ್ ‘ತಾಲಿಬಾನ್ ಆಡಳಿತ ಭಾರತಕ್ಕೆ ಸಂಕಷ್ಟ’ ಚರ್ಚೆಯಲ್ಲಿ ಮಾತನಾಡಿದ ಅವರು ಹಿರಿಯ ಪತ್ರಕರ್ತ, ನಿರೂಪಕ ಚಂದ್ರಮೋಹನ್  ಪ್ರಶ್ನೆಗಳಿಗೆ ಈವರೆಗೆ ಮುನ್ನೆಲೆಯ ಚರ್ಚೆಗೆ ಬಾರದ ಭಿನ್ನನೋಟವನ್ನು ಕಟ್ಟಿಕೊಟ್ಟರು. ಅವರು ಟಿವಿ9 ಕನ್ನಡ ಡಿಜಿಟಲ್ ಲೈವ್​ನಲ್ಲಿ ಚರ್ಚಿಸಿದ ವಿಯಗಳ ಅಕ್ಷರರೂಪ ನಿಮ್ಮ ಓದಿಗೆ ಇಲ್ಲಿದೆ.

ಸದ್ಯ ಯಾರನ್ನು ಕೇಳಿದರೂ ಹೇಳುವ ಎರಡು ಪದಗಳು ಅಫ್ಘಾನಿಸ್ತಾನ ಮತ್ತು ತಾಲಿಬಾನ್. 1989ರಲ್ಲಿ ಸೋವಿಯತ್ ಯೂನಿಯನ್​ನ ಕೊನೆಯ ಸೈನಿಕ ದಳ ಅಫ್ಘಾನಿಸ್ತಾನದಿಂದ ಮರಳುವಾಗ ನಾನು ಕಾಬೂಲ್​ನಲ್ಲಿ ಕೆಲಸದ ನಿಮಿತ್ತ ವಾಸವಿದ್ದೆ. 1996ರಿಂದ 2001ರವರೆಗಿನ ಕಾಲಘಟ್ಟವನ್ನು ಅವಲೋಕಿಸಬೇಕೇ ಅಥವಾ 4 ದಶಕದಿಂದ ಅಫ್ಘಾನಿಸ್ತಾನದ ಯುದ್ಧವನ್ನು ಗಮನಿಸಬೇಕೇ?  1996ರಿಂದ 2001ರವರೆಗಿನ 5 ವರ್ಷಗಳ ತಾಲಿಬಾನ್ ಆಳ್ವಿಕೆಯಲ್ಲಿ ಮೃತಪಟ್ಟ ಜನಸಂಖ್ಯೆಗಿಂತ ಸಾವಿರ ಪಟ್ಟು ಹೆಚ್ಚು ಜನರು ಸೋವಿಯತ್ ಯೂನಿಯನ್ ಮತ್ತು ಅಮೆರಿಕಗಳ ಆಕ್ರಮಣದಿಂದ ಅಫ್ಘಾನಿಸ್ತಾನದಲ್ಲಿ ಮೃತಪಟ್ಟಿದ್ದಾರೆ, ತೊಂದರೆಗೊಳಗಾಗಿದ್ದಾರೆ.  ಅಫ್ಘಾನಿಸ್ತಾನದಲ್ಲಿ ಯುದ್ಧ, ಒತ್ತಡ, ಆಕ್ರಮಣ ಅಥವಾ ಶಾಂತಿ ಇನ್ಯಾವುದೇ ಸಂಭವಿಸಿದರೂ ಎಲ್ಲ ಉತ್ತರೋತ್ತರ ಘಟನೆಗಳನ್ನು  ಅಂತಿಮವಾಗಿ ನಿರ್ಧರಿಸುವವರು ಆಫ್ಘನ್ ಪ್ರಜೆಗಳೇ ಹೊರತು ನಾವಲ್ಲ. ಭವಿಷ್ಯದಲ್ಲಿ ಘಟಿಸಬಹುದಾದ ಬದಲಾವಣೆಗೆ ಭಾರತ ತೆರೆದುಕೊಳ್ಳಲು ಇದು ಸರಿಯಾದ ಸಮಯವೂ ಹೌದು.

ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಬೇಕಾದಷ್ಟು ಅನ್ಯಾಯ, ಅತ್ಯಾಚಾರ ಎಸಗಿದೆ, ಅದು ಖಂಡಿತ ಅಕ್ಷಮ್ಯ ಅಪರಾಧ. ಆದರೆ ‘ಎರಡು ಸೂಪರ್ ಪವರ್ ದೇಶಗಳು’ ನಡೆಸಿದ ಆಕ್ರಮಣದಿಂದ ಜರುಗಿದ ಅತ್ಯಾಚಾರಗಳನ್ನು ನಾವು ಮರೆಯುವಂತಿಲ್ಲ. 1979ರಲ್ಲಿ ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನದ ಮೇಲೆ ಯುದ್ಧ ನಡೆಸಿದಾಗ ಅದನ್ನು ಸೋಲಿಸಿದವರೇ ತಾಲಿಬಾನಿಗಳು. ನಂತರ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದ ಅಮೆರಿಕವನ್ನೂ ತಾಲಿಬಾನಿಗಳು ಸೋಲಿಸಿದರು. ತಮ್ಮ ದೇಶವನ್ನು ಆಳ್ವಿಕೆ ಮಾಡಹೊರಟ ಸೋವಿಯತ್ ರಷ್ಯಾವನ್ನೂ, ಅಮೆರಿಕವನ್ನೂ ಅಫ್ಘಾನಿಸ್ತಾನದ ಪ್ರಜೆಗಳೇ ಆದ ತಾಲಿಬಾನಿಗಳು ಸೋಲಿಸಿದರು. ಪರಕೀಯ ದೇಶಗಳು ಅಫ್ಘಾನಿಸ್ತಾನದ ನೆಲದಲ್ಲಿ ಕಾರುಬಾರು ನಡೆಸುವುದನ್ನು ಅವರು ವಿರೋಧಿಸಿದರು. ಅಫ್ಘಾನಿಸ್ತಾನ ಅಮೆರಿಕದ ಹಿಡಿತದಲ್ಲಿದ್ದ 20 ವರ್ಷಗಳಲ್ಲಿ 2 ಲಕ್ಷ ಜನರು ಮೃತಪಟ್ಟಿದ್ದರು ಎಂಬ ವರದಿಗಳಿವೆ. ಈ ಸಾವುಗಳಿಗೆ ಯಾರು ಹೊಣೆ? ಈ ಪ್ರಶ್ನೆಯನ್ನು ನಾವು ಮರೆಯಬಾರದು.

ತಾಲಿಬಾನ್ ಬದಲಾಗಿರಬಹುದೇ? ತಾಲಿಬಾನಿಗಳ ಕೈ ಮೇಲಾಗಿರುವುದು ಭಾರತದ ಅವಿಭಾಜ್ಯ ಅಂಗ ಕಾಶ್ಮೀರದ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಎಂದು ಹಲವರು ಕೇಳುತ್ತಾರೆ. ಹೌದು, ಖಂಡಿತವಾಗಿಯೂ ಈ ಅಪಾಯ ಇದ್ದೇ ಇದೆ. ಆದರೆ. ತಾಲಿಬಾನ್ ವಕ್ತಾರರು ಈಗಾಗಲೇ ಯಾವುದೇ ದೇಶಗಳ ಮೇಲೆ ಆಕ್ರಮಣ ನಡೆಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜತೆಗೆ ಆಫ್ಘನ್ ನೆಲದಲ್ಲಿ ಯಾವುದೇ ತೀವ್ರಗಾಮಿ ಸಂಘಟನೆಗೂ ಜಾಗ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ವರದಿಗಳನ್ನು ನೋಡಿದರೆ 20 ವರ್ಷಗಳ ಹಿಂದಿನ ತಾಲಿಬಾನ್ ಈಗಿಲ್ಲ. ಅದೂ ಸಹ ಬದಲಾಗಿದೆ. ಹಲವು ದೇಶಗಳು ತಾಲಿಬಾನ್ಗೆ ಮಾನ್ಯತೆ ಕೊಡುವ ಮಾತನಾಡಿವೆ, ಭಾರತಕ್ಕೂ ಇದು ಅನಿವಾರ್ಯವಾಗಲಿದೆ. ಎಲ್ಲ ದೇಶಗಳೂ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಕೊಡುವುದು ಅಗತ್ಯವಾಗಲಿದೆ. ಅಫ್ಘಾನಿಸ್ತಾನಲ್ಲಿ ಆಡಳಿತ ನೀಡಲಿರುವ ತಾಲಿಬಾನ್ ಸಂಘಟನೆ ಜತೆ ಯಾವುದೇ ಮಾತುಕತೆಗೆ ಸಿದ್ಧತೆ ತೋರಿಸದಿರುವುದು ಭಾರತ ಸರ್ಕಾರದ ವೈಫಲ್ಯ. ತಾಲಿಬಾನ್ ಸರ್ಕಾರದಲ್ಲಿ ಉಗ್ರಗಾಮಿ ಚಟುವಟಿಕೆ ನಡೆದರೆ ಅದನ್ನು ನಡೆಸಿದವರನ್ನು ಅಲ್ಲಿಯ ಜನತೆಯೇ ದೇಶದಿಂದ ಹೊರನೂಕುತ್ತದೆ.

1996ರಿಂದ 2001ರವರೆಗಿನ ತಾಲಿಬಾನ್ ನಡೆಸಿದ ಆಡಳಿತವೇ ಈಗಲೂ ನಡೆಯಲಿದೆ ಎಂದು ಹೇಳಲಿಕ್ಕಾಗದು. ಅಂದಿನ ತಾಲಿಬಾನ್ ಆಡಳಿತ ನಡೆಸಿದ ದುಷ್ಕೃತ್ಯಗಳನ್ನು ಮುಂದುವರೆಸದೇ ಹೊಸ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ತಾಲಿಬಾನ್ ಸಹ ಆಡಳಿತ ನಡೆಸಬಹುದು. ಈ ದಿಕ್ಕಿನಲ್ಲಿ ತಾಲಿಬಾನ್ ವಕ್ತಾರರು ಹೇಳಿಕೆ ನೀಡಿದ್ದಾರೆ.  ವಾಜಪೇಯಿಯವರು ‘ನಮ್ಮ ಗೆಳೆಯರನ್ನು ಬದಲಿಸಬಹುದೇ ಹೊರತೂ, ಅಕ್ಕಪಕ್ಕದ  ನಿವಾಸಿಗಳನ್ನಲ್ಲ’ ಎಂದು ಹೇಳುತ್ತಿದ್ದರು. ಈಗಲೂ ನಾವು ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುವ ಸರ್ಕಾರಕ್ಕೆ ಸಹಕರಿಸಬೇಕು .ಆದರೆ ಒಂದುವೇಳೆ ತಾಲಿಬಾನ್ ಸರ್ಕಾರ ನಮಗೆ ಮಾರಕವಾದರೆ ಮಾತ್ರ ಯಾವುದೇ ಕಾರಣಕ್ಕೂ ಸುಮ್ಮನಿರದೇ ಅವರಿಗೆ ತಕ್ಕ ಪಾಠ ಕಲಿಸಬೇಕು. ಕೇವಲ ಭೂತಕಾಲದ ಚುಂಗು ಹಿಡಿದು ಯೋಚಿಸುವುದಕ್ಕಿಂತ ವರ್ತಮಾನದ ಬದಲಾವಣೆಯಿಂದ ಆಶಾವಾದ ಮೂಡಿಸಲಿ ಎಂದು ನಾವು ಬಯಸಬಹುದಷ್ಟೇ.  ಆದರೆ ಎಲ್ಲವನ್ನೂ ನಿರ್ಧರಿಸುವುದು ಅಫ್ಘಾನಿಸ್ತಾನದ ಸಾರ್ವಜನಿಕರೇ ಹೊರತೂ ನಾವಲ್ಲ ಎಂಬುದನ್ನೂ ತಮ್ಮ ಮಾತಿಗೆ ಸೇರಿಸುವುದನ್ನು ಸುಧೀಂದ್ರ ಕುಲಕರ್ಣಿ ಮರೆಯಲಿಲ್ಲ.

ಇದನ್ನೂ ಓದಿ: 

ಮರಳಿ ತಾಯ್ನಾಡಿಗೆ ಬರಬೇಡ, ಭಾರತದಲ್ಲೇ ಉಳಿದುಬಿಡು ಎನ್ನುತ್ತಿದ್ದಾರೆ ಪೋಷಕರು; ಮೈಸೂರಿನಲ್ಲಿರುವ ಅಪ್ಘನ್ ವಿದ್ಯಾರ್ಥಿಗಳ ಅಳಲು

640 ಮಂದಿಯನ್ನು ಒಂದೇ ಬಾರಿಗೆ ಅಫ್ಘಾನ್​​ನಿಂದ ಕತಾರ್​ಗೆ ಸಾಗಿಸಿದ ಯುಎಸ್​ ಮಿಲಿಟರಿ ವಿಮಾನ; ಮನಕಲಕುವ ದೃಶ್ಯ

(TV9 Kannada Digital Live special Afghanistan Crisis patriotism of the Taliban who drove the foreign power of America and Russia)

Published On - 6:22 pm, Tue, 17 August 21