ಚಿಕ್ಕಬಳ್ಳಾಪುರ ಸರ್ಕಾರಿ ಶಾಲಾ ಶಿಕ್ಷಕಿ ಎಡವಟ್ಟು: ಕಣ್ಣಿನ ದೃಷ್ಟಿ ಕಳೆದುಕೊಂಡ ಬಾಲಕ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಓರ್ವ ಶಿಕ್ಷಕಿ ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿ ತನ್ನ ಕಣ್ಣು ಕಳೆದುಕೊಂಡಿರುವಂತಹ ಘಟನೆ ನಡೆದಿದೆ. ಘಟನೆ ನಡೆದು ಒಂದು ವರ್ಷ ಕಳೆದರೂ, ಶಿಕ್ಷಕಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೋಷಕರು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು, ಶಿಕ್ಷಣ ಇಲಾಖೆಯಿಂದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ, ಏಪ್ರಿಲ್ 06: ವಿದ್ಯಾರ್ಥಿಯ (Student) ಬಾಳಿಗೆ ಬೆಳಕು ಆಗಬೇಕಾದ ಶಿಕ್ಷಕಿಯೇ (Teacher) ವಿದ್ಯಾರ್ಥಿ ಬಾಳು ಕತ್ತಲಾಗುವಂತೆ ಮಾಡಿದ ಆರೋಪ ಕೇಳಿ ಬಂದಿದೆ. ಸಿಟ್ಟಿನ ಭರದಲ್ಲಿ ಶಿಕ್ಷಕಿ ಬೀಸಿದ ಕೋಲು ವಿದ್ಯಾರ್ಥಿಯ ಕಣ್ಣನ್ನು ಕಳೆದುಕೊಂಡಿರುವ ಆರೋಪ ಕೇಳಿ ಬಂದಿದೆ. ಶಿಕ್ಷಕಿಯ ಏಟಿಗೆ 1 ವರ್ಷದ ನಂತರ ಬಾಲಕನ ದೃಷ್ಟಿಯೇ ಸಂಪೂರ್ಣ ಕಾಣದಂತಾಗಿದ್ದು, ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲೆಯ ಚಿಂತಾಮಣಿ ಮಗರದ ಬಿಇಒ ಕಚೇರಿ ಎದುರು ಧರಣಿ ಮಾಡಿರುವಂತಹ ಘಟನೆ ನಡೆದಿದೆ.
ಮಾಡದ ತಪ್ಪಿಗೆ ಕಣ್ಣು ಕಳೆದುಕೊಂಡ ಬಾಲಕ
ತಾನು ಮಾಡದ ತಪ್ಪಿಗೆ ಚಿಕ್ಕ ವಯಸ್ಸಿನಲ್ಲೇ ಬಾಲಕ ಕಣ್ಣು ಕಳೆದುಕೊಂಡಿದ್ದಾನೆ. ಮಗನಿಗೆ ನ್ಯಾಯ ಕೊಡಿಸುವಂತೆ ಪೋಷಕರು ಕಣ್ಣೀರು ಹಾಕಿದ್ದಾರೆ. ಬಾಲಕನ ಹೆಸರು ಯಶವಂತ್. ಚಿಂತಾಮಣಿ ತಾಲೂಕಿನ ಯಗವಕೋಟೆ ಗ್ರಾಮದ ನಟರಾಜ್ ಹಾಗೂ ಅಂಕಿತಾ ದಂಪತಿಗಳ ಎರಡನೇ ಮಗನಾಗಿರುವ ಯಶ್ವಂತ್, ಅದೇ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ 2 ನೇ ತರಗತಿಯ ವಿದ್ಯಾರ್ಥಿ.
ಇದನ್ನೂ ಓದಿ: ಮಂಗಳೂರು: 100 ಪರ್ಸೆಂಟ್ ಫಲಿತಾಂಶಕ್ಕಾಗಿ ಮಕ್ಕಳನ್ನು SSLC ಪರೀಕ್ಷೆ ಬರೆಯಲು ಬಿಡದ ಶಿಕ್ಷಕರು!
ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಶಾಲೆಯ ಶಿಕ್ಷಕಿ ಸರಸ್ವತಿ ಕುಳಿತ ಜಾಗದಿಂದಲೇ ಕೋಲು ಬೀಸಿದ್ದಾಳೆ, ಇದರ ಪರಿಣಾಮ ನೇರವಾಗಿ ಕೋಲು ಯಶ್ವಂತ್ ಕಣ್ಣಿಗೆ ಬಿದ್ದು ಗಾಯಗೊಂಡಿದ್ದ. ಅಂದಿನಿಂದ ಪೋಷಕರು ಎಲ್ಲ ಕಡೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇದುವರೆಗೂ ಶಸ್ತ್ರ ಚಿಕಿತ್ಸೆ ಫಲಕಾರಿಯಾಗಿಲ್ಲ. ಇದ್ರಿಂದ ಒಂದು ವರ್ಷದ ನಂತರ ಬಾಲಕನ ದೃಷ್ಟಿ ಕಾಣದಾಗಿದೆ.
ದೂರು ನೀಡಿದರೂ ಕ್ರಮವಿಲ್ಲ
ಇನ್ನೂ ಶಿಕ್ಷಕಿ ಸರಸ್ವತಿ ವಿರುದ್ದ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು, ದೂರು ದಾಖಲು ಮಾಡಿಲ್ಲ. ಬಿ.ಇ.ಐ ಸೇರಿದಂತೆ ಶಿಕ್ಷಣ ಇಲಾಖೆಗೆ ದೂರು ನಿಡಿದರೂ ಯಾವುದೆ ಕ್ರಮ ಕೈಗೊಂಡಿಲ್ಲ. ದೂರು ದಾಖಲಿಸಿ ಕ್ರಮ ಕೈಗೊಳ್ಳುವುದರ ಬದಲು ನ್ಯಾಯ ಪಂಚಾಯತಿಗೆ ಮುಂದಾಗಿದ್ದರಂತೆ. ಇದ್ರಿಂದ ವಿದ್ಯಾರ್ಥಿಗೆ ನ್ಯಾಯ ಸಿಕ್ಕಿಲ್ಲ.
ಇದನ್ನೂ ಓದಿ: ಅಜ್ಜಿ ಮೃತದೇಹಕ್ಕೆ ಪೂಜೆ ಸಲ್ಲಿಸಿ ದುಃಖದಲ್ಲಿಯೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ
ಒಟ್ಟಿನಲ್ಲಿ ಶಿಕ್ಷಕಿ ಮಾಡಿದ ತಪ್ಪಿಗೆ ವಿದ್ಯಾರ್ಥಿಯ ಒಂದು ಕಣ್ಣು ದೃಷ್ಟಿ ಕಳೆದುಕೊಂಡ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಕಳೆದ ಒಂದು ವರ್ಷದಿಂದ ಶಿಕ್ಷಕಿಯ ವಿರುದ್ದ ಕ್ರಮಕೈಗೊಳ್ಳದ ಆರೋಪ ಕೂಡ ಕೇಳಿ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:31 pm, Sun, 6 April 25