ದಾವಣಗೆರೆಯಲ್ಲೊಂದು ಅಮಾನುಷ ಕೃತ್ಯ: ಮರಕ್ಕೆ ಕಟ್ಟಿ ಗುಪ್ತಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಹಕ್ಕಿಪಿಕ್ಕಿ ಬಾಲಕರ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಕಳ್ಳತನದ ಆರೋಪದ ಮೇಲೆ ಇಬ್ಬರು ಬಾಲಕರಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗಿದೆ. ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ಸದ್ಯ ಒಂಬತ್ತು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಒಬ್ಬನ್ನು ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ, ಏಪ್ರಿಲ್ 06: ಕಳ್ಳತನ ಸೇರಿದಂತೆ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕರನ್ನು (boys) ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದು, ಜೊತೆಗೆ ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ನಲ್ಲೂರ ಬಳಿ ಇರುವ ಅಸ್ತಾಪನಹಳ್ಳಿಯಲ್ಲಿ ಏಪ್ರಿಲ್ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಿತ್ರಹಿಂಸೆ ನೀಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇತ್ತ ಟಿವಿ9 ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಪೊಲೀಸರು 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಸುಭಾಷ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಕ್ಕಿ- ಪಿಕ್ಕಿ ಜನಾಂಗದ ಬಾಲಕರ ಮೇಲೆ ಅದೇ ಜನಾಂಗದ ಹತ್ತು ಯುವಕರಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ಹತ್ತು ಜನರ ಪೈಕಿ ನಾಲ್ವರು ಅಪ್ರಾಪ್ತರು. ಸುಭಾಷ್ (23), ಲಕ್ಕಿ(21), ದರ್ಶನ್ (22), ಪರಶು (25), ಶಿವದರ್ಶನ್ (23), ಹರೀಶ್ (25), ಪಟ್ಟಿ ರಾಜು(20), ಭೂಣಿ (18), ಸುಧನ್ ಅಲಿಯಾಸ್ ಮಧುಸೂಧನ್ ವಿರುದ್ದ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಸಾಲ ಕೊಡದ ಸಿಟ್ಟಿಗೆ 17 kg ಚಿನ್ನ ಕದ್ದರು: ಬ್ಯಾಂಕ್ ದರೋಡೆ ಮಾಡಲೆಂದೇ ಆ ವೆಬ್ ಸಿರೀಸ್ ನೋಡಿದ್ದ ಸಹೋದರರು
ಗಿಡ ಮೂಲಿಕೆ ಮಾರಾಟ ಮಾಡಿ ಹಕ್ಕಿ ಪಿಕ್ಕಿ ಜನಾಂಗದ ಜನ ಜೀವನ ನಡೆಸುತ್ತಾರೆ. ಇದು ಕೆಲ ತಿಂಗಳ ಹಿಂದೆ ನಡೆದ ಘಟನೆ ಎನ್ನಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿರುವ ಸಾದ್ಯತೆ ಎಂಬುದು ಸ್ಥಳೀಯರ ಮಾತಾಗಿದೆ.
ಅಸ್ತಾಪನಹಳ್ಳಿ ಗ್ರಾಮದ ದರ್ಶನ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ. ಬಳಿಕ ಬಾಲಕನನ್ನು ಹಿಡಿದು ಅಡಕೆ ತೋಟಕ್ಕೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಕಳ್ಳತನಕ್ಕೆ ಸಹಕರಿಸಿದ್ದ ಇನ್ನೊಬ್ಬ ಬಾಲಕನಿಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಲ್ಲೆಗೊಳಗಾದ ಬಾಲಕನ ತಾತನಿಂದ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ 9 ಯುವಕರ ವಿರುದ್ಧ FIR ದಾಖಲಾಗಿದೆ.
ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿ ಮೇಲೆ ಯುವಕನಿಂದ ಹಲ್ಲೆ ಆರೋಪ
ಲೋನ್ ರಿಕವರಿಗೆಂದು ಹೋಗಿದ್ದ ಬ್ಯಾಂಕ್ ಸಿಬ್ಬಂದಿಗೆ ಓರ್ವ ಯುವಕ ಅವಾಜ್ ಹಾಕಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಂದನ್ ಎಂಬಾತನ ಮೇಲೆ ರಕ್ತ ಬರುವ ಹಾಗೆ ಯುವಕ ಹಲ್ಲೆ ಮಾಡಿದ್ದಾನೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಗಾಳಿ ಆಂಜನೇಯ ಜಾತ್ರೆ: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗಗಳು ಹೀಗಿವೆ
ರಮೇಶ್ ಎರಡು ತಿಂಗಳಿಂದ ಬೈಕ್ ಲೋನ್ ಕಟ್ಟದ ಹಿನ್ನಲೆ, ಬ್ಯಾಂಕ್ ಸಿಬ್ಬಂದಿ ಚಂದನ್ ಕರೆ ಮಾಡಿ ಲೋನ್ ಕಟ್ಟುವಂತೆ ತಿಳಿಸಿದ್ದಾರೆ. ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಲೋನ್ ಹಣ ಕೊಡುತ್ತೇನೆಂದು ಹೇಳಿದ್ದ ರಮೇಶ್, ಸ್ಥಳಕ್ಕೆ ಹೋಗಿದ್ದ ಬ್ಯಾಂಕ್ ಸಿಬ್ಬಂದಿ ಚಂದನ್ಗೆ ಅವಾಚ್ಯ ಪದಗಳಿಂದ ನಿಂದಿಸಿ ಕಲ್ಲಿನಿಂದ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದ ಚಂದನ್, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:34 am, Sun, 6 April 25