ಅಜ್ಜಿ ಮೃತದೇಹಕ್ಕೆ ಪೂಜೆ ಸಲ್ಲಿಸಿ ದುಃಖದಲ್ಲಿಯೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ
ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಿವೆ. ಆದರೆ ಗದಗ ಜಿಲ್ಲೆಯಲ್ಲಿ ಅಜ್ಜಿಯ ಸಾವಿನ ನೋವಿನಲ್ಲೂ ವಿದ್ಯಾರ್ಥಿನಿ ಧೈರ್ಯದಿಂದ ಪರೀಕ್ಷೆ ಬರೆದ ಘಟನೆ ನಡೆದಿದೆ. ಮತ್ತೊಂದು ಘಟನೆಯಲ್ಲಿ, ಪರೀಕ್ಷಾ ಕೇಂದ್ರದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದ ಬಳಿಕ ಮತ್ತೆ ಪರೀಕ್ಷೆಗೆ ಹಾಜರಾದ ಘಟನೆ ನಡೆದಿದೆ.

ಗದಗ, ಮಾರ್ಚ್ 21: ಇಂದು ಕರ್ನಾಟಕದಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ (SSLC Exam) ಆರಂಭವಾಗಿವೆ. ಈ ಸಂದರ್ಭದಲ್ಲಿ ಪರೀಕ್ಷೆ ದಿನವೇ ವಿದ್ಯಾರ್ಥಿನಿಯ ಅಜ್ಜಿ ಸಾವನ್ನಪ್ಪಿದ್ದು (death), ದುಖಃದಲ್ಲೇ ವಿದ್ಯಾರ್ಥಿನಿ ಪರೀಕ್ಷೆ ಬರೆದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ಡಂಬಳದ ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ಜಲಜಾಕ್ಷಿ ಕಿಲಾರಿ ವಿದ್ಯಾರ್ಥಿನಿ ಅಜ್ಜಿ ವಯೋಸಹಜ ಕಾಯಿಲೆಯಿಂದ ಮೃತರಾಗಿದ್ದಾರೆ. ಎಸ್ಎಸ್ಎಲ್ಸಿ ಕನ್ನಡ ವಿಷಯದ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದ ವಿದ್ಯಾರ್ಥಿನಿಗೆ ಅಜ್ಜಿ ಸಾವು ದುಖಃ ತಂದಿದೆ.
ಪರೀಕ್ಷೆಗೆ ಬರೆಯಲು ಭಯದಲ್ಲಿದ್ದ ಜಲಜಾಕ್ಷಿಗೆ ಪಾಲಕರು, ಶಾಲೆಯ ಶಿಕ್ಷಕರು ಮತ್ತು ಅವಳ ಸಹಪಾಠಿಗಳು ಧೈರ್ಯ ತುಂಬಿದ್ದಾರೆ. ಶಿಕ್ಷಕಿ ಶ್ರೀಮತಿ ಎ.ಬಿ ಬೇವಿನಕಟ್ಟಿ, ಸಂಜುತ ಸಂಕಣ್ಣವರ್, ಶ್ರೀಮತಿ ಎಸ್ಎಂ ಹಂಚಿನಾಳ, ಬುದಪ್ಪ ಅಂಗಡಿ, ಎಸ್ಎಸ್ ತಿಮ್ಮಾಪುರ್, ಎಂಎಂ ಗೌಳೆರ ಎಲ್ಲ ಶಿಕ್ಷಕರು ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಮೃತ ಅಜ್ಜಿಗೆ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡು ಬಂದು ಎದೆಯಲ್ಲಿ ದುಃಖ ತುಂಬಿಕೊಂಡೇ ಧೈರ್ಯದಿಂದ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾಳೆ.
ಪರೀಕ್ಷಾ ಕೇಂದ್ರ ದಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿ
ಇನ್ನು ಇದೇ ದಿನ ಪರೀಕ್ಷಾ ಕೇಂದ್ರದಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿಯನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸರ್ಕಾರಿ ಪಿಯು ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದೆ. ನಾಝಿಯಾ ಬಾನು ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿ.
ಇದನ್ನೂ ಓದಿ: SSLC ಪರೀಕ್ಷೆಗೆ ಕ್ಷಣಗಣನೆ: ಇನ್ನೂ ಹಾಲ್ ಟಿಕೆಟ್ ಸಿಗದೇ ವಿದ್ಯಾರ್ಥಿಗಳು ಕಂಗಾಲು, ಪೋಷಕರು ಆತಂಕ
ಪರೀಕ್ಷೆ ಆರಂಭವಾದ ಕೆಲ ಕ್ಷಣದಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಹೊನ್ನಾಳಿ ಜನತಾ ಉರ್ದು ಹೈಸ್ಕೂಲ್ ವಿದ್ಯಾರ್ಥಿನಿ ನಾಝಿಯಾ ಭಾನು, ಕೂಡಲೇ ಹೊನ್ನಾಳಿ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ವಿದ್ಯಾರ್ಥಿನಿ ಮತ್ತೆ ಪರೀಕ್ಷೆಗೆ ಹಾಜರಾಗಿದ್ದಾಳೆ.
ಆರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದ ಶಾಲಾ ಮುಖ್ಯೋಪಾಧ್ಯಾಯರು
ವಿಜಯಪುರ ತಾಲೂಕಿನ ಬುರಣಾಪುರ ಗ್ರಾಮದಲ್ಲಿರುವ ಮಾಜಿ ಶಾಸಕ ಮನೋಹರ ಐನಾಪೂರ ಒಡೆತನದ ಡಿಬಿಇ ಸಂಸ್ಥೆಯ ಕರ್ನಾಟಕ ಪ್ರೌಢ ಶಾಲೆಯಲ್ಲಿ ಆರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿಲ್ಲ. ಹಾಗಾಗಿ ಅವರು ಪರೀಕ್ಷೆಗೆ ಹಾಜರಾಗಲು ಅಸಾಧ್ಯವಾಗಿದೆ. ನ್ಯಾಯಕ್ಕಾಗಿ ಇಬ್ಬರು ವಿದ್ಯಾರ್ಥಿಗಳು ಡಿಸಿ ಕಚೇರಿಗೆ ಆಗಮಿಸಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ದಿನೇಶ ಗೊಡೇಕರ, ರಂಜಾನ್ ಸಿಂದಗಿ, ರೋಷನ್ ರಾಠೋಡ್, ಅಜಿತ್ ಸಣ್ಣಕ್ಕಿ, ಸುವರ್ಣಾ ಹೊಟಕರ, ಅಲ್ತಾನ್ ಹತ್ತರಕಿಹಾಳ ಎಂಬುವವರಿಗೆ ಹಾಲ್ ಟಿಕೆಟ್ ನೀಡಿಲ್ಲ.
ಇದನ್ನೂ ಓದಿ: ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್: ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು, ವಿದ್ಯಾರ್ಥಿಗಳು ಪರದಾಟ
ಇದನ್ನು ಪ್ರಶ್ನಿಸಿ ನಿನ್ನೆ ಪೋಷಕರು ಶಾಲಾ ಮುಖ್ಯೋಪಾಧ್ಯಾಯ ಪಿಡ್ಲ್ಯೂ ರಾಠೋಡ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮುಖ್ಯೋಪಾಧ್ಯಾಯ ಪಿಡ್ಲ್ಯೂ ರಾಠೋಡ್ ನಿಮ್ಮ ಮಕ್ಕಳ ಹಾಜರಾತಿ ಶೇಕಡಾ 75 ಕ್ಕಿಂತ ಕಡಿಮೆ ಇದೆ ಹಾಗಾಗಿ ನಾನು ಪರೀಕ್ಷಾ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂದಿದ್ದಾರೆ. ಇದೀಗ ಎಸ್ಎಸ್ಎಲ್ಸಿ 1 ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆ 2 ಕ್ಕೆ ಅನುಕೂಲ ಮಾಡಿಕೊಡೋದಾಗಿ ಪೋಷಕರಿಗೆ ಲಿಖಿತ ಪತ್ರ ನೀಡಿಲ್ಲ. ಆದರೆ ಇವರ ಆರೋಪವನ್ನು ವಿದ್ಯಾರ್ಥಿಗಳು ಪೋಷಕರು ಅಲ್ಲಗಳೆದಿಲ್ಲ. ಹಾಜರಾಗಿ ಕಡಿಮೆಯಾಗೋ ಪ್ರಶ್ನೆ ಬರಲ್ಲ. ನಾವೆಲ್ಲಾ ರೆಗ್ಯೂಲರ್ ಆಗಿ ಕ್ಲಾಸ್ಗೆ ಹಾಜರಾಗಿದ್ದೇವೆ. ಆದರೆ ಶಾಲಾ ಸಿಬ್ಬಂದಿ ನಮ್ಮ ಪರೀಕ್ಷೆ ಅರ್ಜಿಯನ್ನು ಹಾಕದೇ ನಿರ್ಲಕ್ಷ್ಯ ಮಾಡಿದ್ಧಾರೆ. ಅದನ್ನು ಮರೆ ಮಾಚಲು ಹಾಜರಾತಿ ಕಡಿಮೆ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು ಎಂದು ಅಸಮಾಧಾನ ಹೊರ ಹಾಕಿದ್ದಾರೆ. ನಮಗೆ ಜಿಲ್ಲಾಧಿಕಾರಿಗಳು ನ್ಯಾಯ ನೀಡಬೇಕೆಂದು ಡಿಸಿ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಕೆ ಮಾಡಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.