Impact on India: ತಾಲಿಬಾನ್ ವಶಕ್ಕೆ ಅಫ್ಘಾನಿಸ್ತಾನ, ಭಾರತದ ಭದ್ರತೆಗೆ ಹಲವು ಆತಂಕ

Impact of India: ತಾಲಿಬಾನ್​ಗಳ ಕೈಲಿ ಅಫ್ಘಾನಿಸ್ತಾನದ ಮಿಲಿಟರಿ, ಆರ್ಥಿಕ ಸಂಪನ್ಮೂಲ ಸೇರಿದಂತೆ ಎಲ್ಲವೂ ಇದೆ. ಆಮೆರಿಕಾದ ಯಡವಟ್ಟುಗಳ ಪರಿಣಾಮವನ್ನು ಭಾರತವು ಎದುರಿಸಬೇಕಾಗಿದೆ.

Impact on India: ತಾಲಿಬಾನ್ ವಶಕ್ಕೆ ಅಫ್ಘಾನಿಸ್ತಾನ, ಭಾರತದ ಭದ್ರತೆಗೆ ಹಲವು ಆತಂಕ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ದಾಳಿ
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 16, 2021 | 6:12 PM

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಭಾರತದ ಮೇಲೆ ಆಗಬಹುದಾದ ಸಂಭಾವ್ಯ ಪರಿಣಾಮಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಬೆಳವಣಿಗೆಯು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಮುಂದಿರುವ ಆಯ್ಕೆಗಳ ಬಗ್ಗೆಯೂ ಚಿಂತಕರ ಚಾವಡಿಯಲ್ಲಿ ವಿಶ್ಲೇಷಣೆಗಳು ಆರಂಭವಾಗಿವೆ.

ಅಫ್ಘಾನಿಸ್ತಾನದಲ್ಲಿ ಆಮೆರಿಕಾ ಆರಂಭಿಸಿದ್ದ ಭಯೋತ್ಪಾದನೆ ವಿರುದ್ಧದ ಸಮರ ಅಂತ್ಯವಾಗಿದೆ. ಆದರೆ, ಈ ಸಮರದಲ್ಲಿ ಆಮೆರಿಕಾ ಗೆಲುವು ಸಾಧಿಸಿಲ್ಲ, ಭಯೋತ್ಪಾದನಾ ಸಂಘಟನೆ ತಾಲಿಬಾನ್ ಮೇಲುಗೈ ಸಾಧಿಸಿದೆ. ಭಯೋತ್ಪಾದನೆಯನ್ನು ನಿರ್ಮೂಲಗೊಳಿಸುವಲ್ಲಿ ಹಾಗೂ ಭಯೋತ್ಪಾದಕರನ್ನು ಅಫ್ಘಾನಿಸ್ತಾನದಿಂದ ಬುಡಸಹಿತ ಕಿತ್ತು ಹಾಕುವಲ್ಲಿ ಆಮೆರಿಕಾ ಸಂಪೂರ್ಣ ವಿಫವಾಗಿದೆ. ಕಳೆದ ಏಪ್ರಿಲ್ ತಿಂಗಳಿನಿಂದಲೇ ಅಮೆರಿಕಾ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಂಡಿದೆ. 2001ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಸಮರ ಸಾರಿ, ಅಮೆರಿಕಾ ತನ್ನ ಸೇನೆಯನ್ನು ಅಫ್ಘಾನಿಸ್ತಾನಕ್ಕೆ ಕಳಿಸಿತ್ತು.

2001ರ ಆಕ್ಟೋಬರ್​ನಲ್ಲಿ ಆಮೆರಿಕಾದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್, ‘ಈಗ ತಾಲಿಬಾನ್ ತಾನು ಮಾಡಿದ ತಪ್ಪಿಗೆ ಬೆಲೆ ತೆರಬೇಕು. ತಾಲಿಬಾನ್ ಉಗ್ರರ ಕ್ಯಾಂಪ್​ಗಳನ್ನು ನಾವು ನಾಶಪಡಿಸುತ್ತೇವೆ. ಕಮ್ಯೂನಿಕೇಷನ್ ನೆಟ್​ವರ್ಕ್​ಗಳನ್ನು ನಾಶಪಡಿಸಿ ಟೆರರ್ ನೆರ್ಟ್​ವರ್ಕ್ ಇನ್ನಿಲ್ಲ ಎನಿಸುತ್ತೇವೆ. ಹೊಸದಾಗಿ ಉಗ್ರರಿಗೆ ತರಬೇತಿ ನೀಡದಂತೆ, ದುಷ್ಟ ಪ್ಲ್ಯಾನ್​ಗಳನ್ನು ಜಾರಿ ಮಾಡದಂತೆ ತಡೆಯುತ್ತೇವೆ’ ಎಂದು ಆಗ ಜಾರ್ಜ್ ಬುಷ್ ಹೇಳಿದ್ದರು.

ಈ ಹೇಳಿಕೆಗೆ ಈಗ 20 ವರ್ಷವಾಗಿದೆ. ಆಮೆರಿಕಾಕ್ಕೆ ಅಫ್ಘಾನಿಸ್ತಾನದಲ್ಲಿ ತನ್ನ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಅಫ್ಘಾನಿಸ್ತಾನದ ವೈಫಲ್ಯದ ಬಗ್ಗೆ ಚರ್ಚೆಗೂ ಆಮೆರಿಕಾ ಹಾಗೂ ಆಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಸಿದ್ಧರಿಲ್ಲ. ‘ನಾನು ಸಂತೋಷದ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅಫ್ಘಾನಿಸ್ತಾನದ ಬಗ್ಗೆ ಯಾವುದೇ ಪ್ರಶ್ನೆಗೂ ನಾನು ಉತ್ತರ ಕೊಡುವುದಿಲ್ಲ’ ಎಂದು 2021ರ ಜುಲೈ ತಿಂಗಳಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯಿಸಿದ್ದರು.

ಈ ವರ್ಷ ಆಮೆರಿಕಾವು ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ತೀರ್ಮಾನ ಕೈಗೊಂಡು ಅದನ್ನು ಜಾರಿಗೆ ತಂದಿದೆ. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ತೀರ್ಮಾನ ಈಗ ಅಫ್ಘಾನಿಸ್ತಾನದ ನಾಗರಿಕರ ಪಾಲಿಗೆ ಮರಣ ಶಾಸನವಾಗಿದೆ. ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾದ ನಂತರ ತಾಲಿಬಾನ್ ಉಗ್ರಗಾಮಿ ಸಂಘಟನೆಯು ದಿನದಿಂದ ದಿನಕ್ಕೆ ಬಲಗೊಳ್ಳುತ್ತಾ ಸಾಗಿತು. ಅಫ್ಘಾನಿಸ್ತಾನದ ಒಂದೊಂದೇ ಪ್ರಾಂತ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡು, ಅಂತಿಮವಾಗಿ ಆಗಸ್ಟ್ 15ರಂದು ರಾಜಧಾನಿ ಕಾಬೂಲ್ ಅನ್ನು ಕೂಡ ತಾಲಿಬಾನ್ ಉಗ್ರಗಾಮಿ ಸಂಘಟನೆಯು ತನ್ನ ವಶಕ್ಕೆ ತೆಗೆದುಕೊಂಡಿತು.

ಈ ವರ್ಷದ ಏಪ್ರಿಲ್ 14ರಂದು ಆಮೆರಿಕಾ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿತು. ಆದಾದ ಬಳಿಕ ತಾಲಿಬಾನ್ ಸಂಘಟನೆಯು ಅಫ್ಘಾನಿಸ್ತಾನ ಸೇನೆಯ ಕನಿಷ್ಠ ಪ್ರತಿರೋಧದೊಂದಿಗೆ ಒಂದೊಂದೇ ಪ್ರಾಂತ್ಯಗಳನ್ನು ವಶಕ್ಕೆ ತೆಗೆದುಕೊಂಡು ರಾಜಧಾನಿ ಕಾಬೂಲ್​ನತ್ತ ಮುನುಗ್ಗಿತು. ಜುಲೈ 15ರ ವೇಳೆಗೆ 80ಕ್ಕೂ ಹೆಚ್ಚು ಜಿಲ್ಲೆಗಳನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ತಾಲಿಬಾನ್ ಉಗ್ರಗಾಮಿ ಸಂಘಟನೆಯಲ್ಲಿ 85 ಸಾವಿರಕ್ಕೂ ಹೆಚ್ಚು ಫುಲ್​ಟೈಮ್ ಉಗ್ರಗಾಮಿಗಳಿದ್ದಾರೆ. ಈ ಉಗ್ರಗಾಮಿಗಳೆಲ್ಲರೂ ಜಿಹಾದಿಗಳು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತಾಲಿಬಾನ್ ಸಂಘಟನೆ ಸೇರಿದ್ದಾರೆ. ಅದರೆ, ಅಫ್ಘಾನಿಸ್ತಾನದ ಸೇನೆಯ ಬಲವು ತಾಲಿಬಾನ್ ಉಗ್ರರ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಆದರೆ, ತಾಲಿಬಾನ್ ಉಗ್ರರಿಗೆ ಅಫ್ಘಾನಿಸ್ತಾನದ ಸೇನೆ ಮತ್ತು ಸರ್ಕಾರ ಶರಣಾಗಿದೆ. ಬಹಳಷ್ಟು ಪ್ರಾಂತ್ಯಗಳಲ್ಲಿ ಅಫ್ಘಾನಿಸ್ತಾನದ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನೇ ತಾಲಿಬಾನ್ ಉಗ್ರರಿಗೆ ಒಪ್ಪಿಸಿ ಶರಣಾಗಿದ್ದಾರೆ. ಅನೇಕ ಕಡೆಗಳಲ್ಲಿ ಅಫ್ಘನ್ ಸರ್ಕಾರದ ಸೈನಿಕರು ಉಗ್ರರ ವಿರುದ್ಧ ಹೋರಾಟ ಮಾಡದೇ, ಪ್ರಾಂತ್ಯಗಳನ್ನೇ ತಾಲಿಬಾನ್ ಉಗ್ರರ ಕೈಗೆ ಒಪ್ಪಿಸಿ ಜೀವ ಉಳಿಸಿಕೊಳ್ಳಲು ನೆರೆಹೊರೆಯ ದೇಶಗಳಿಗೆ ಓಡಿ ಹೋಗಿದ್ದಾರೆ.

ಅಫ್ಘಾನಿಸ್ತಾನದಿಂದ ಆಮೆರಿಕಾದ ಸೇನೆ ಹಿಂದೆ ಸರಿದ ಆರೇ ತಿಂಗಳಲ್ಲಿ ಅಫ್ಘಾನಿಸ್ತಾನ ಸರ್ಕಾರ ಪತನವಾಗುತ್ತೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಆಮೆರಿಕಾದ ಇಂಟಲಿಜೆನ್ಸ್ ಏಜೆನ್ಸಿಯೇ ವರದಿ ನೀಡಿತ್ತು. ಆಮೆರಿಕಾದ ಇಂಟಲಿಜೆನ್ಸ್ ವರದಿಯು ನಾಲ್ಕೇ ತಿಂಗಳಲ್ಲಿ ನಿಜವಾಗಿದೆ. ಏಪ್ರಿಲ್​ನಿಂದ ಆಗಸ್ಟ್ ವೇಳೆಗೆ ಕೇವಲ ನಾಲ್ಕೇ ತಿಂಗಳಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈಗ ತಾಲಿಬಾನ್ ಅಫ್ಘಾನಿಸ್ತಾನದ ಸಂಪನ್ಮೂಲ, ರಾಜಕೀಯ, ಗಡಿಗಳನ್ನು ನಿಯಂತ್ರಿಸುತ್ತಿದೆ.

Talibani leaders

ತಾಲಿಬಾನ್ ನಾಯಕರು

ಭಾರತಕ್ಕೆ ಹಲವು ಸವಾಲು ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು, ಪಾಕಿಸ್ತಾನ, ಚೀನಾದ ಪಾಲಿಗೆ ಒಳ್ಳೆಯ ಅವಕಾಶ. ಆದರೆ, ಭಾರತದ ಪಾಲಿಗೆ ಇದು ಭದ್ರತೆಗೊಡ್ಡಿದ ದೊಡ್ಡ ಸವಾಲು. ಭಾರತದ ಭದ್ರತೆಗೂ ಧಕ್ಕೆ ತರುವ ಬೆಳವಣಿಗೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದಲ್ಲಿ ಭಾರತ ಮಾಡಿರುವ ಹೂಡಿಕೆಗೂ ದೊಡ್ಡ ರಿಸ್ಕ್ ಎದುರಾಗಿದೆ. ಅಫ್ಘಾನಿಸ್ತಾನದಲ್ಲಿ ₹ 22,500 ಕೋಟಿ ಹಣವನ್ನು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಅಫ್ಘಾನಿಸ್ತಾನದ ಸಂಸತ್ ಭವನವನ್ನು ಭಾರತ ನಿರ್ಮಿಸಿಕೊಟ್ಟಿದೆ. ನೀರಿನ ಸಂಗ್ರಹಕ್ಕೆ ಡ್ಯಾಂ ನಿರ್ಮಿಸುತ್ತಿದೆ. 34 ಪ್ರಾಂತ್ಯಗಳಲ್ಲಿ ಡ್ಯಾಂ, ಸ್ಕೂಲ್, ಆಸ್ಪತ್ರೆ, ರಸ್ತೆ ಸೇರಿದಂತೆ 400 ಅಭಿವೃದ್ದಿ ಯೋಜನೆಗಳನ್ನು ಭಾರತ ಜಾರಿಗೊಳಿಸುತ್ತಿದೆ. ಇವೆಲ್ಲವನ್ನೂ ಈಗ ತಾಲಿಬಾನ್ ಉಗ್ರರು ಅತಿಕ್ರಮಿಸಿದ್ದು, ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಭಾರತದ ನಾಗರಿಕರೂ ಇದ್ದಾರೆ. ಭಾರತದ ನಾಗರಿಕರಿಗೆ ಈಗ ಅಭದ್ರತೆ ಎದುರಾಗಿದೆ. ಅಫ್ಘಾನಿಸ್ತಾನದ ಜಲಾಲಾಬಾದ್, ಹೆರಾತ್, ಕಂದಹಾರ್ ಹಾಗೂ ರಾಜಧಾನಿ ಕಾಬೂಲ್ ನಗರಗಳಲ್ಲಿ ಭಾರತದ ರಾಯಭಾರ ಕಚೇರಿಗಳಿದ್ದವು. ಈಗ ಈ ಎಲ್ಲ ರಾಯಭಾರ ಕಚೇರಿಗಳನ್ನು ಮುಚ್ಚಲಾಗಿದೆ. ಮಾರ್ಚ್ ತಿಂಗಳಿನಲ್ಲೇ ಜಲಾಲಾಬಾದ್ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಏಪ್ರಿಲ್ ತಿಂಗಳಿನಲ್ಲಿ ಹೆರಾತ್ ರಾಯಭಾರ ಕಚೇರಿಯನ್ನು ಮುಚ್ಚಲಾಗಿತ್ತು. ಜೂನ್ ತಿಂಗಳಿನಲ್ಲಿ ಕಂದಹಾರ್ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಈಗ ಕಾಬೂಲ್ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಭಾರತಕ್ಕೆ ತುರ್ತಾಗಿ ಏರ್ ಲಿಫ್ಟ್ ಮಾಡಲಾಗಿದೆ.

ಪಾಕಿಸ್ತಾನವನ್ನು ನಂಬಿ ಕೆಟ್ಟ ಅಮೆರಿಕಾ ಅಫ್ಘಾನಿಸ್ತಾನದ ಅಂತರಿಕ ಬೆಳವಣಿಗೆಗಳು ಅಫ್ಘಾನಿಸ್ತಾನಕ್ಕೆ ಮಾತ್ರ ಸಂಬಂಧಿಸಿದ್ದು ಎಂದು ಭಾರತ ತನ್ನ ಪಾಡಿಗೆ ತಾನು ಇರಲು ಸಾಧ್ಯವಿಲ್ಲ. ಅಲ್ಲಿ ಆಗುವ ಬೆಳವಣಿಗೆಗಳು ಭಾರತದ ಭದ್ರತೆಯ ಮೇಲೆಯೂ ಪರಿಣಾಮ ಬೀರುತ್ತವೆ. ಭಾರತದ ಉತ್ತರ ಭಾಗದಲ್ಲಿ ಚೀನಾ ಇದೆ. ಚೀನಾದೊಂದಿಗೆ ಭಾರತಕ್ಕೆ ಮೊದಲಿನಿಂದಲೂ ಗಡಿ ವಿವಾದ ಇದೆ. ಚೀನಾ ಭಾರತದ ವೈರಿ ರಾಷ್ಟ್ರ. ಮತ್ತೊಂದೆಡೆ ಭಾರತದ ಪಶ್ಚಿಮ ಭಾಗದಲ್ಲಿ ಪಾಕಿಸ್ತಾನ ಇದೆ. ಪಾಕಿಸ್ತಾನ ಕೂಡ ಭಾರತದ ವೈರಿ ರಾಷ್ಟ್ರ. ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಅಫ್ಘಾನಿಸ್ತಾನ ಪಾಕ್​ ಜೊತೆಗೆ ಗಡಿ ಹಂಚಿಕೊಂಡಿದೆ. ಪಾಕಿಸ್ತಾನ ಹಾಗೂ ಚೀನಾ ದೇಶಗಳೆರೆಡೂ ತಾಲಿಬಾನ್ ಉಗ್ರಗಾಮಿ ಸಂಘಟನೆಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳು. ಭಾರತದ ವೈರಿ ರಾಷ್ಟ್ರಗಳಾದ ಪಾಕ್, ಚೀನಾ ಈಗಾಗಲೇ ತಾಲಿಬಾನ್ ಉಗ್ರಗಾಮಿ ಸಂಘಟನೆಯ ಜೊತೆಗೆ ಕೈ ಜೋಡಿಸಿವೆ. ತಾಲಿಬಾನ್ ಉಗ್ರಗಾಮಿ ಸಂಘಟನೆಯ ಉಗ್ರರು ಪಾಕಿಸ್ತಾನದ ಕ್ವೆಟ್ಟಾ ಮತ್ತು ಪೆಷಾವರ್​ನಲ್ಲಿ ತರಬೇತಿ ಪಡೆದಿದ್ದಾರೆ. ಜೊತೆಗೆ ತಾಲಿಬಾನ್ ಉಗ್ರಗಾಮಿ ಸಂಘಟನೆಯು ಪಾಕಿಸ್ತಾನದ ಕ್ವೆಟ್ಟಾ ಹಾಗೂ ಪೆಷಾವರ್​ನಲ್ಲಿ ತನ್ನ ಕಚೇರಿಯನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಪಾಕಿಸ್ತಾನವನ್ನು ನಂಬಿ ಆಮೆರಿಕಾ ಕೆಟ್ಟಿದೆ.

ಆಮೆರಿಕಾವು ತಾಲಿಬಾನ್ ಉಗ್ರರ ವಿರುದ್ಧದ ಹೋರಾಟದಲ್ಲಿ ಸೋಲು ಅನುಭವಿಸಲು ಪಾಕಿಸ್ತಾನದ ಪಾತ್ರವೂ ಇದೆ. ಪಾಕಿಸ್ತಾನವು ಒಂದೆಡೆ ಆಮೆರಿಕಾಕ್ಕೆ ಬೆಂಬಲ ನೀಡಿದಂತೆ ನಟಿಸಿ, ತಾಲಿಬಾನ್ ಉಗ್ರರಿಗೆ ಸಂಪೂರ್ಣ ಬೆಂಬಲ, ತರಬೇತಿ ನೀಡಿದೆ. ಇದನ್ನು ಖುದ್ದಾಗಿ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಬ್ದುಲ್ಲಾ ಸಲೇಹಾ ಕೂಡ ಹೇಳಿದ್ದಾರೆ. ಪಾಕಿಸ್ತಾನದ ವಾಯುಪಡೆಯು ತಾಲಿಬಾನ್ ಉಗ್ರರಿಗೆ ಏರ್ ಸಪೋರ್ಟ್ ನೀಡುತ್ತಿದೆ ಎಂದು ಅಬ್ದುಲ್ಲಾ ಸಲೇಹಾ ಹೇಳಿದ್ದರು. ಅಫ್ಘಾನಿಸ್ತಾನ ಮಾತ್ರವಲ್ಲ, ಪಾಕಿಸ್ತಾನದ ಸಂಸದರು ಕೂಡ ಪಾಕ್ ಪಾರ್ಲಿಮೆಂಟ್​ನಲ್ಲಿ ಪಾಕ್ ಸರ್ಕಾರ ತಾಲಿಬಾನ್ ಉಗ್ರರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದರು. ಪಾಕಿಸ್ತಾನದ ಮೊಹಸಿನ್ ದ್ಲಾರ್ ಎಂಬ ಸಂಸದ, ನಮ್ಮ ಸರ್ಕಾರಕ್ಕೆ ತಾಲಿಬಾನ್ ಉಗ್ರರ ಕಂಡರೇ ಇಷ್ಟೊಂದು ಪ್ರೀತಿ ಇದ್ದರೇ, ನಮ್ಮ ಸರ್ಕಾರವನ್ನು ಅವರಿಗೆ ಒಪ್ಪಿಸಿಬಿಡಲಿ ಎಂದು ಸಂಸತ್​ನಲ್ಲಿಯೇ ಹೇಳಿದ್ದರು.

ಈಗ ತಾಲಿಬಾನ್ ಮತ್ತು ಪಾಕಿಸ್ತಾನದ ವಕ್ರದೃಷ್ಟಿ ಭಾರತದ ಕಾಶ್ಮೀರದ ಮೇಲೆ ಬೀಳುವ ಸಾಧ್ಯತೆಯೂ ಇದೆ. ತಾಲಿಬಾನ್ ಉಗ್ರರ ಗೆಲುವುನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸಲಾಗುತ್ತಿದೆ. ತಾಲಿಬಾನಿಗಳನ್ನ ಬೆಂಬಲಿಸಿ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಱಲಿ ನಡೆಸಲಾಗಿದೆ. ತಾಲಿಬಾನ್ ಪರ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪನೆಯ ಘೋಷಣೆ ಕೂಗಲಾಗಿದೆ. ಪಾಕಿಸ್ತಾನದಲ್ಲಿ ತಾಲಿಬಾನಿಗಳಿಗೆ ಡೋನೇಷನ್ ಕೂಡ ಸಂಗ್ರಹಿಸಲಾಗಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಸಂಘಟನೆಗಳೂ ಕೂಡ ಈಗ ತಾಲಿಬಾನ್ ಜೊತೆಗೆ ಕೈ ಜೋಡಿಸುವ ಸಾಧ್ಯತೆಯೂ ಇದೆ. ಪಾಕಿಸ್ತಾನದ ಲಷ್ಕರ್-ಎ-ತಯ್ಯಬಾ, ಜೈಷ್-ಎ-ಮೊಹಮ್ಮದ್, ತೆಹ್ರಿಕ್ ಇ ತಾಲಿಬಾನ್-ಪಾಕಿಸ್ತಾನ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳು ತಾಲಿಬಾನ್ ಜೊತೆಗೆ ಕೈ ಜೋಡಿಸಲಿವೆ. ಈ ಎಲ್ಲ ಉಗ್ರಗಾಮಿ ಸಂಘಟನೆಗಳ ಒಂದೇ ಟಾರ್ಗೆಟ್ ಕಾಶ್ಮೀರ ಆಗಬಹುದು. ಈ ಉಗ್ರಗಾಮಿ ಸಂಘಟನೆಗಳ ಕಣ್ಣು ಕಾಶ್ಮೀರದ ಮೇಲೆ ಬೀಳಲಿದೆ.

ಇದನ್ನೂ ಓದಿ: ತಾಲೀಬಾನ್ ಆಡಳಿತಕ್ಕೆ ಪರೋಕ್ಷ ಸಹಮತ ಸೂಚಿಸಿದ ಚೀನಾ, ಪಾಕಿಸ್ತಾನ

Talibanis celebrate after occupying Ghazni city

ತಾಲಿಬಾನ್ ಉಗ್ರರು (ಪ್ರಾತಿನಿಧಿಕ ಚಿತ್ರ)

ಡೇಂಜರಸ್ ತಾಲಿಬಾನ್ ತಾಲಿಬಾನ್ ಸಂಘಟನೆಯು ಸ್ಟ್ರಾಂಗ್ ಆದಂತೆ ಧಾರ್ಮಿಕ ಮೂಲಭೂತವಾದ ಹೆಚ್ಚಾಗಲಿದೆ. ಜಿಹಾದಿಗಳ ಸಂಖ್ಯೆ ಹೆಚ್ಚಾಗಲಿದೆ. ಇದು ಪಾಕಿಸ್ತಾನದ ಉಗ್ರಗಾಮಿಗಳ ಸಂಘಟನೆಗಳಿಗೆ ಉತ್ತೇಜನ ನೀಡಲಿದೆ. ಪಾಕ್ ಉಗ್ರಗಾಮಿ ಸಂಘಟನೆಗಳು ಗಡಿ ನುಸುಳಿ ಭಾರತದೊಳಕ್ಕೆ ಬರಲು ಯತ್ನಿಸಲಿವೆ. ಅಫ್ಘಾನಿಸ್ತಾನ ಸರ್ಕಾರ, ಸೇನೆಯೇ ತಾಲಿಬಾನಿಗಳಿಗೆ ಶರಣಾಗಿದೆ. ಇದರಿಂದ ತಾಲಿಬಾನಿಗಳ ಕೈಗೆ ಸಲೀಸಾಗಿ ಶಸ್ತ್ರಾಸ್ತ್ರಗಳು ಸಿಗುತ್ತೆ. ಈ ಶಸ್ತ್ರಾಸ್ತ್ರಗಳು ಕಾಶ್ಮೀರಕ್ಕೆ ಬರಬಹುದು. ಕಾಶ್ಮೀರದೊಳಕ್ಕೆ ನುಗ್ಗಲು ಯತ್ನಿಸುವ ಉಗ್ರರ ಕೈಗೆ ತಾಲಿಬಾನ್ ಶಸ್ತ್ರಾಸ್ತ್ರಗಳನ್ನು ನೀಡಲಿದೆ. ಹ್ಯಾಂಡ್ ಮೇಡ್ ಗ್ರೇನೇಡ್, ಐಇಡಿ ಡ್ರೋನ್, ಸ್ನೈಪರ್ ರೈಫಲ್​ಗಳನ್ನು ಉಗ್ರರು ಬಳಸುತ್ತಿದ್ದಾರೆ. ಇವುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಆಗ ಕಾಶ್ಮೀರದಲ್ಲಿ ಭದ್ರತೆಯ ಸವಾಲು ಮತ್ತಷ್ಟು ಹೆಚ್ಚಾಗಲಿದೆ. ಕಾಶ್ಮೀರವನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಬಿಂಬಿಸಬಹುದು.

ಅಫ್ಘಾನಿಸ್ತಾನ ದೇಶವೇ ಈಗ ತಾಲಿಬಾನ್ ಉಗ್ರಗಾಮಿ ಸಂಘಟನೆಯ ನಿಯಂತ್ರಣದಲ್ಲಿದೆ. ಅಫ್ಘಾನಿಸ್ತಾನದಲ್ಲಿ ಎಲ್ಲವನ್ನೂ ಈಗ ತಾಲಿಬಾನಿಗಳೇ ನಿರ್ಧರಿಸುತ್ತಾರೆ. ವಿವಿಧ ದೇಶಗಳು ನಡೆಸುವ ಮಾತುಕತೆಯಲ್ಲಿ ತಾಲಿಬಾನ್ ಸಂಘಟನೆಯ ಪ್ರತಿನಿಧಿಗಳಿಗೂ ಭಾಗವಹಿಸಲು ಅವಕಾಶ ಕೊಡಬೇಕಾಗುತ್ತೆ. ಉಗ್ರಗಾಮಿ ಸಂಘಟನೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ, ಮನ್ನಣೆ ನೀಡಬೇಕಾಗುತ್ತೆ. ಆದರೆ, ಭಾರತ, ಆಮೆರಿಕಾ, ಬ್ರಿಟನ್ ದೇಶಗಳು ತಾಲಿಬಾನ್​ಗೆ ಮಾನ್ಯತೆ ಕೊಡುವುದಿಲ್ಲ ಎಂದು ಹೇಳಿವೆ. ಈಗಾಗಲೇ ತಾಲಿಬಾನ್ ಸಂಘಟನೆಯು ಕತಾರ್​ನ ದೋಹಾದಲ್ಲಿ ತನ್ನ ಕಚೇರಿ ತೆರೆದಿದೆ. ಅದನ್ನು ಶಾಂತಿ ಕಚೇರಿ ಎಂದು ಕರೆದಿದೆ. ಆದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ನಿಂದಲೇ ಜನರ ಶಾಂತಿ ಹಾಳಾಗಿದೆ. ಒಂದು ಉಗ್ರಗಾಮಿ ಸಂಘಟನೆಯನ್ನು ಸಕ್ರಮಗೊಳಿಸಿದರೇ, ಉಳಿದ ಉಗ್ರಗಾಮಿ ಸಂಘಟನೆಗಳು ಅದೇ ಬೇಡಿಕೆ ಇಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಭಾರತದ ಮುಂದಿರುವ ಆಯ್ಕೆಗಳೇನು? ಈಗ ಭಾರತದ ಮುಂದಿರುವ ಆಯ್ಕೆಗಳೇನು ಎನ್ನುವ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಭಾರತವು ತಾಲಿಬಾನ್ ಉಗ್ರಗಾಮಿ ಸಂಘಟನೆಯ ಜೊತೆಗೆ ತೆರೆಮರೆಯಲ್ಲೇ ಮಾತುಕತೆ ನಡೆಸುತ್ತಿದೆ ಎಂಬ ವರದಿಗಳು ಇವೆ. ಆದರೆ, ಇದನ್ನು ಭಾರತದ ವಿದೇಶಾಂಗ ಇಲಾಖೆ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

ಭಾರತವು ಈಗಿರುವ ತನ್ನ ಮಿಲಿಟರಿ ಶಕ್ತಿಯನ್ನು ಮತ್ತಷ್ಟು ಬಲಪಡಿಸಬೇಕು. ಐಇಡಿ ಡ್ರೋನ್ ದಾಳಿಯನ್ನು ಮಟ್ಟ ಹಾಕಲು ಸಜ್ಜಾಗಬೇಕು. ಉಗ್ರಗಾಮಿಗಳನ್ನು ಮಟ್ಟ ಹಾಕಲು ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಬೇಕು. ಹೊಸ ತಂತ್ರಜ್ಞಾನಗಳನ್ನು ಭದ್ರತೆಯಲ್ಲಿ ಆಳವಡಿಸಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಹೊಸ ಕಾರ್ಯತಂತ್ರ ಆಳವಡಿಸಿಕೊಳ್ಳಬೇಕು. ನಗರ ಪ್ರದೇಶದ ಯುವಜನತೆಯೇ ತಾಲಿಬಾನ್ ಸಿದ್ದಾಂತಕ್ಕೆ ಮಾರುಹೋಗಬಹುದು. ಜಿಹಾದಿ ಕೃತ್ಯಗಳನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಗಳು ಕೇಳಿಬಂದಿವೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮೇಲುಗೈ ಸಾಧಿಸಿರುವುದು ಈಗ ವಾಸ್ತವ. ಆಮೆರಿಕಾದಂಥ ಬಲಿಷ್ಠ ರಾಷ್ಟ್ರಕ್ಕೆ ತಾಲಿಬಾನ್ ಉಗ್ರರನ್ನು ಸೋಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ತಾಲಿಬಾನಿ​ಗಳ ಶಕ್ತಿಯನ್ನು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ. ತಾಲಿಬಾನ್​ಗಳ ಕೈಲಿ ಈಗ ಇಡೀ ದೇಶವೇ ಇದೆ. ಮಿಲಿಟರಿ, ಅಫ್ಘಾನಿಸ್ತಾನದ ಸಂಪನ್ಮೂಲ ಸೇರಿದಂತೆ ಎಲ್ಲವೂ ಇದೆ. ಆಮೆರಿಕಾದ ಯಡವಟ್ಟುಗಳ ಪರಿಣಾಮವನ್ನು ಭಾರತವು ಎದುರಿಸಬೇಕಾಗಿದೆ. ತಾಲಿಬಾನ್ ಉಗ್ರರು ಭಾರತದ ತಂಟೆಗೆ ಬರದಂತೆ ದೂರ ಇಡಬೇಕು. ಆಮೆರಿಕಾವು ಕಳೆದ 70 ವರ್ಷಗಳಲ್ಲಿ ಗಲ್ಪ್ ರಾಷ್ಟ್ರಗಳ ಯುದ್ಧ ಹೊರತುಪಡಿಸಿ, ಉಳಿದ ಯಾವುದೇ ಯುದ್ದಗಳನ್ನು ಗೆದ್ದಿಲ್ಲ. ಈಗ ಅಫ್ಘಾನಿಸ್ತಾನದಲ್ಲೂ ತಾಲಿಬಾನ್ ಉಗ್ರಗಾಮಿ ಸಂಘಟನೆಗಳ ಜೊತೆಗೆ ಯುದ್ಧದಲ್ಲಿ ಗೆಲ್ಲಲಾಗದೆ, ದೇಶ ಬಿಟ್ಟು ಕಾಲ್ಕಿತ್ತಿದೆ. ಅಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

(News Analysis Taliban win in Afghanistan threat to indias security)

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದ ಪತನ; ಆತುರಗೆಟ್ಟ ದೊಡ್ಡಣ್ಣ ಜೋ ಬೈಡನ್​ ಯಾಮಾರಿದ್ದು ಎಲ್ಲಿ? ಮುಂದೇನು?

ಇದನ್ನೂ ಓದಿ: ಅಫ್ಘಾನಿಸ್ಥಾನದ ಅಭಿವೃದ್ಧಿಗೆ ಭಾರತ ಖರ್ಚು ಮಾಡಿತ್ತು 22 ಸಾವಿರ ಕೋಟಿ ರೂಪಾಯಿ: ಏನಾಗಲಿದೆ ಅದರ ಭವಿಷ್ಯ?

Published On - 6:10 pm, Mon, 16 August 21