AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲೀಬಾನ್ ಆಡಳಿತಕ್ಕೆ ಪರೋಕ್ಷ ಸಹಮತ ಸೂಚಿಸಿದ ಚೀನಾ, ಪಾಕಿಸ್ತಾನ

ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಈ ಎರಡೂ ದೇಶಗಳು ಉಗ್ರರ ಆಡಳಿತಕ್ಕೆ ಶೀಘ್ರದಲ್ಲಿಯೇ ಮಾನ್ಯತೆ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಲೀಬಾನ್ ಆಡಳಿತಕ್ಕೆ ಪರೋಕ್ಷ ಸಹಮತ ಸೂಚಿಸಿದ ಚೀನಾ, ಪಾಕಿಸ್ತಾನ
ಚೀನಾ ಮತ್ತಿತರ ದೇಶಗಳು ಸ್ವಾಗತ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 16, 2021 | 4:19 PM

ದೆಹಲಿ: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಪಾಕಿಸ್ತಾನ ಮತ್ತು ಚೀನಾ ದೇಶಗಳು ಪರೋಕ್ಷ ಸಹಮತ ಸೂಚಿಸಿದೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಈ ಎರಡೂ ದೇಶಗಳು ಉಗ್ರರ ಆಡಳಿತಕ್ಕೆ ಶೀಘ್ರದಲ್ಲಿಯೇ ಮಾನ್ಯತೆ ನೀಡಬಹುದು ಎಂಬ ವಿಶ್ಲೇಷಣೆಗಳೂ ರಾಜತಾಂತ್ರಿಕ ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ವಿಜಯವನ್ನು ಶ್ಲಾಘಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್, ‘ಅಫ್ಘಾನಿಸ್ತಾನದಲ್ಲಿ ದಾಸ್ಯದ ಸಂಕೋಲೆಗಳನ್ನು ತಾಲಿಬಾನ್ ತುಂಡರಿಸಿದೆ’ ಎಂದು ಶ್ಲಾಘಿಸಿದ್ದಾರೆ. ತಾಲಿಬಾನ್ ಗೆಲುವಿನ ಬಗ್ಗೆ ಅತ್ಯಂತ ಜಾಣತನದಿಂದ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರರು, ಅಫ್ಘಾನಿಸ್ತಾನದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ಅವಕಾಶ ಇದೀಗ ದೊರೆತಿದೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನಕ್ಕೆ ನಿಜವಾದ ಸ್ವಾತಂತ್ರ್ಯ: ಇಮ್ರಾನ್ ಖಾನ್ ಇಂಗ್ಲಿಷ್ ಮಾಧ್ಯಮ ಮತ್ತು ಸಂಸ್ಕೃತಿಯ ಬಗ್ಗೆ ಇಸ್ಲಾಮಾಬಾದ್​ನಲ್ಲಿ ನಡೆದ ಚಿಂತನಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ‘ನೀವು ಇನ್ನೊಬ್ಬರ ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು, ಮಾನಸಿಕವಾಗಿ ಅವರ ಅಧೀನದಲ್ಲಿರುತ್ತೀರಿ. ಇದು ಗುಲಾಮಗಿರಿಗಿಂತಲೂ ಹೀನಾಯವಾದುದು. ಸಾಂಸ್ಕೃತಿಕ ಗುಲಾಮಗಿರಿಯಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ. ಅಫ್ಘಾನಿಸ್ತಾನದಲ್ಲಿ ಈಗ ಇಂಥ ಬಂಧನದ ಸಂಕೋಲೆಗಳನ್ನು ಕಿತ್ತೊಗೆಯಲಾಗಿದೆ’ ಎಂದು ಹೇಳಿದರು.

ತಾಲಿಬಾನ್​ಗೆ ನೆರವು: ಚೀನಾ ಅಫ್ಘಾನಿಸ್ತಾನದೊಂದಿಗೆ ಹೊಂದಿರುವ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸಲು ಚೀನಾ ಬಯಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್​ ಯಿ ಈ ಮೊದಲು ಹೇಳಿದ್ದರು. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸದಿದ್ದರೆ ದೇಶದ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು.

‘ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದುವ ಆಶಯವನ್ನು ತಾಲಿಬಾನ್ ನಾಯಕರು ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ಅಭಿವೃದ್ಧಿಗೆ ನಮ್ಮಿಂದ ಸಹಾಯ ಸಿಗಬಹುದು ಎಂದು ಅವರು ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ಅಫ್ಘಾನ್ ಜನರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರಿಗೆ ತಮ್ಮ ಆಡಳಿತ ಮತ್ತು ಭವಿಷ್ಯವನ್ನು ನಿರ್ಧರಿಸಿಕೊಳ್ಳುವ ಎಲ್ಲ ಸ್ವಾತಂತ್ರ್ಯವಿದೆ’ ಎಂದು ಚೀನಾ ಸರ್ಕಾರದ ಪರವಾಗಿ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರೆ ಹ್ವೂ ಚುನ್ಯಿಂಗ್ ಹೇಳಿದ್ದಾರೆ.

(China Pakistan on the verge of accepting Taliban Rule in Afghanistan)

ಇದನ್ನೂ ಓದಿ: ಒಮ್ಮೆ ರಷ್ಯಾ, ಮತ್ತೊಮ್ಮೆ ಅಮೆರಿಕ: ದ್ರೋಹ-ವಿಶ್ವಾಸಗಳ ವ್ಯಾಖ್ಯಾನವನ್ನೇ ಬದಲಿಸಬಲ್ಲ ತಂತ್ರಗಾರನಿಗೆ ಅಫ್ಗನ್ ಅಧ್ಯಕ್ಷ ಗಾದಿ

ಇದನ್ನೂ ಓದಿ: Afghanistan Crisis: ತಾಲಿಬಾನ್ ವಶದಲ್ಲಿ ಅಫ್ಘಾನಿಸ್ತಾನ; ಕಾಬೂಲ್ ವಿಮಾನ ನಿಲ್ದಾಣದಲ್ಲಿ 5 ಜನರ ಹತ್ಯೆ

Published On - 4:15 pm, Mon, 16 August 21