ಕೇಂದ್ರ ಸರ್ಕಾರವು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಇನ್ನೂ ಸಂಸತ್ತಿನಲ್ಲಿ ಮಂಡಿಸಿಲ್ಲ. ಆದರೆ ಆಗಲೇ ಈ ಮಸೂದೆಯ ಬಗ್ಗೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೂ ಮಸೂದೆಯನ್ನು ವಿರೋಧಿಸಿ ಪ್ರಧಾನಿಗೆ ಪತ್ರವನ್ನು ಬರೆದಿದ್ದಾರೆ. ಇಂಥ ಜನವಿರೋಧಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಡಿ. ಇದು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳು ಮಕ್ತವಾಗಿ ಕಾರ್ಯನಿರ್ವಹಿಸಲು, ಸರ್ಕಾರಿ ಸ್ವಾಮ್ಯದ ವಿತರಣಾ ಕಂಪನಿಗಳೊಂದಿಗೆ ಸ್ಪರ್ಧಿಸಲು ಈ ಮಸೂದೆ ಅವಕಾಶ ನೀಡುತ್ತದೆ. ಈ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತು, ಕಾಯ್ದೆಯ ಸ್ವರೂಪ ದೊರೆತರೆ ಗ್ರಾಹಕರು ತಮಗೆ ಬೇಕಾದ ವಿತರಣಾ ಕಂಪನಿಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವ ಸ್ವಾತಂತ್ರ್ಯ ಲಭಿಸುತ್ತದೆ. ಗ್ರಾಹಕರಿಗೆ ಇಂಥ ಆಯ್ಕೆ ಸಿಗುವಂತೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.
ದೇಶದ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ವಿತರಣೆಯನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳೇ ನಿರ್ವಹಿಸುತ್ತಿವೆ. ದೆಹಲಿ, ಮುಂಬೈ ಮತ್ತು ಅಹಮದಾಬಾದ್ನಂಥ ಕೆಲ ನಗರಗಳಲ್ಲಿ ಮಾತ್ರ ಖಾಸಗಿ ವಿತರಕರಿಗೆ ಕಾರ್ಯನಿರ್ವಹಿಸಲು ಅವಕಾಶವಿದೆ.
ಬಹುತೇಕ ವಿದ್ಯುತ್ ವಿತರಣಾ ಕಂಪನಿಗಳು ಈಗಾಗಲೇ ನಷ್ಟ ಮತ್ತು ಸಾಲದ ಕೂಪದಲ್ಲಿ ಸಿಲುಕಿವೆ. ವಿತರಣಾ ಕಂಪನಿಗಳನ್ನು ನಷ್ಟದಿಂದ ಹೊರತರಲು, ನಷ್ಟದ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿತ್ತು. ಆದರೆ ಇವು ತಾತ್ಕಾಲಿಕವಾಗಿ ವಿತರಣಾ ಕಂಪನಿಗಳಿಗೆ ತುಸು ಹಣದ ಸಹಾಯ ಒದಗಿಸಿದವು ಎಂಬುದನ್ನು ಹೊರತುಪಡಿಸಿದರೆ, ಹೆಚ್ಚಿನ ಸಾಧನೆಯೇನೂ ಸಾಧ್ಯವಾಗಲಿಲ್ಲ.
ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸಬಾರದೆಂಬ ಆಕ್ಷೇಪವೇಕೆ?
ವಿದ್ಯುತ್ ವಿತರಣೆಗೆ ಖಾಸಗಿ ಕಂಪನಿಗಳ ಮುಕ್ತಪ್ರವೇಶಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರಿ ಸ್ವಾಮ್ಯದ ವಿತರಣಾ ಕಂಪನಿಗಳ ನಷ್ಟದ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ರಾಜ್ಯ ಸರ್ಕಾರಗಳ ಆಕ್ಷೇಪವಾಗಿದೆ. ಲಾಭ ತಂದುಕೊಡುವ ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕಗಳತ್ತ ಮಾತ್ರ ಖಾಸಗಿ ಕಂಪನಿಗಳು ಗಮನಹರಿಸುತ್ತವೆ. ಹೆಚ್ಚಿನ ಜವಾಬ್ದಾರಿ, ಬಾಧ್ಯತೆ ಮತ್ತು ನಷ್ಟಕ್ಕೆ ಕಾರಣವಾಗುವ ಗ್ರಾಮೀಣ ಗೃಹ ಸಂಪರ್ಕಗಳನ್ನು ಕಡೆಗಳಿಸುತ್ತವೆ. ಅದು ಕೊನೆಗೆ ರಾಜ್ಯ ಸರ್ಕಾರಗಳ ಬಾಧ್ಯತೆಯಾಗಿಯೇ ಉಳಿಯುತ್ತದೆ ಎಂದು ರಾಜ್ಯ ಸರ್ಕಾರಗಳು ಹೇಳಿವೆ.
ಮಮತಾ ಬ್ಯಾನರ್ಜಿ ಸಹ ತಮ್ಮ ಪತ್ರದಲ್ಲಿ ಇದೇ ವಿಚಾರವನ್ನು ಪ್ರತಿಪಾದಿಸಿದ್ದಾರೆ. ವಿದ್ಯುತ್ ವಿತರಣಾ ಮಸೂದೆ ತಿದ್ದುಪಡಿಯಿಂದ ಈ ಕ್ಷೇತ್ರವು ಲಾಭವನ್ನೇ ಗಮನದಲ್ಲಿರಿಸಿಕೊಂಡ ಖಾಸಗಿ ಕಂಪನಿಗಳಿಗೆ ನಗರಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಅದೇ ಹೊತ್ತಿಗೆ ನಷ್ಟಕ್ಕೆ ಕಾರಣವಾಗುವ ಗ್ರಾಮೀಣ ಪ್ರದೇಶಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳೇ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಇಂಧನ ಸಚಿವ ಆರ್.ಕೆ.ಸಿನ್ಹಾ ಸಮಕ್ಷಮ ನಡೆದ ಸಭೆಯಲ್ಲಿಯೂ ವಿವಿಧ ರಾಜ್ಯ ಸರ್ಕಾರಗಳು ಈ ಕುರಿತು ತಮ್ಮ ಆತಂಕ ಹೇಳಿಕೊಂಡವು. ‘ಮುಂದಿನ ದಿನಗಳಲ್ಲಿ ವಿದ್ಯುತ್ ವಿತರಣಾ ಕಾರ್ಯದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಿದರೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಹದ ಮಿಶ್ರಣವನ್ನು ಮಾಡಿಕೊಡುತ್ತೇವೆ. ಸಮಾನ ನೆಲೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದ್ದರು.
ರಾಜ್ಯಗಳು ಪ್ರಸ್ತಾಪಿಸುತ್ತಿರುವ ಇತರ ಆತಂಕಗಳೇನು?
ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆಗಳನ್ನು (Renewable energy Purchase Obligations – RPOs) ಈಡೇರಿಸದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸುವ ಬಗ್ಗೆ ಹಲವು ರಾಜ್ಯಗಳು ಆಕ್ಷೇಪಿಸಿವೆ. ಇದರ ಜೊತೆಗೆ ಪ್ರಾದೇಶಿಕ ಲೋಡ್ ಡಿಸ್ಪ್ಯಾಚ್, ಸ್ಟೇಟ್ ಲೋಡ್ ಡಿಸ್ಪ್ಯಾಚ್ ಕೇಂದ್ರಗಳು ರಾಷ್ಟ್ರೀಯ ಲೋಡ್ ಡಿಸ್ಪ್ಯಾಚ್ ಕೇಂದ್ರಗಳ ಸೂಚನೆಯನ್ನು ಪಾಲಿಸಬೇಕು ಎಂಬ ಬಗ್ಗೆಯೂ ಆಕ್ಷೇಪಗಳು ಕೇಳಿಬಂದಿವೆ.
ಈ ನಿಯಮಗಳು ಯಥಾವತ್ತಾಗಿ ಜಾರಿಯಾದರೆ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಬರಲಿದ್ದು, ರಾಜ್ಯಗಳು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತವೆ ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
(What is Electricity Amendment Bill 2021 why states such as West Bengal opposing it)
ಇದನ್ನೂ ಓದಿ: ವಿದ್ಯುತ್ ತಿದ್ದುಪಡಿ ಕಾಯ್ದೆಗೆ ವಿರೋಧ; ಇನ್ನು ಮೂರು ದಿನ ದೇಶಾದ್ಯಂತ ವಿದ್ಯುತ್ ನೌಕರರ ಪ್ರತಿಭಟನೆ
Published On - 9:22 pm, Mon, 9 August 21