Updated on: Jan 19, 2023 | 12:15 PM
ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ವರದಿ ಪ್ರಕಾರ ಬೋಲ್ಟ್ ಗೆ ಕೋಟಿ ಕೋಟಿ ವಂಚನೆಯಾಗಿದ್ದು, ಅವರ ಖಾತೆಯಿಂದ ಬರೋಬ್ಬರಿ 12.7 ಮಿಲಿಯನ್ ಡಾಲರ್ ಅಂದರೆ 101 ಕೋಟಿ ರೂಪಾಯಿ ನಾಪತ್ತೆಯಾಗಿದೆ.
ವಾಸ್ತವವಾಗಿ ಉಸೇನ್ ಬೋಲ್ಟ್, ಜಮೈಕಾದ ಖಾಸಗಿ ಹೂಡಿಕೆ ಸಂಸ್ಥೆಯ ಖಾತೆಯಲ್ಲಿ ಈ ಹಣವನ್ನು ಜಮಾ ಮಾಡಿದ್ದರು. ಆದರೆ ಇದೀಗ ಬೋಲ್ಟ್ ಜಮಾ ಮಾಡಿದ್ದ ಬಹುತೇಕ ಹಣ ನಾಪತ್ತೆಯಾಗಿದೆ. ಬೋಲ್ಟ್ ಪರ ವಕೀಲರು ಈ ಮಾಹಿತಿಯನ್ನು ಖಚಿತಪಡಿಸಿದ್ದು, ಕಿಂಗ್ಸ್ಟನ್, ಜಮೈಕಾ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಅಕೌಂಟ್ ಹೊಂದಿರುವ ಬೋಲ್ಟ್ ಅವರ ಖಾತೆಯಲ್ಲಿ ಈಗ ಕೇವಲ $ 12,000 ಮಾತ್ರ ಉಳಿದಿದೆ ಎಂಬ ಮಾಹಿತಿ ನೀಡಿದ್ದಾರೆ.
ಜಮೈಕಾದ ಹಣಕಾಸು ಸೇವಾ ಆಯೋಗವು ಈ ಬಗ್ಗೆ ತನಿಖೆ ಆರಂಭಿಸಿದೆ. ಭಾರೀ ವಂಚನೆಗೆ ಒಳಗಾಗಿರುವ ಬೋಲ್ಟ್ ಕೂಡ ತನ್ನ ಎಲ್ಲಾ ಹಣವನ್ನು 10 ದಿನಗಳಲ್ಲಿ ವಾಪಸ್ ನೀಡುವಂತೆ ಹೂಡಿಕೆ ಸಂಸ್ಥೆಗೆ ತಾಕೀತು ಮಾಡಿದ್ದಾರೆ. ಒಂದು ವೇಳೆ ನಿಗದಿತ ಸಮಯದಲ್ಲಿ ಹಣವನ್ನು ಹಿಂದಿರುಗಿಸದಿದ್ದರೆ, ಹೂಡಿಕೆ ಸಂಸ್ಥೆ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದ ಉಸೇನ್ ಬೋಲ್ಟ್, 2018ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ 45ನೇ ಸ್ಥಾನದಲ್ಲಿದ್ದರು. 1 ಮಿಲಿಯನ್ ಡಾಲರ್ ಸಂಬಳ ಪಡೆಯುತ್ತಿದ್ದ ಬೋಲ್ಟ್, ಇತರೆ ಮೂಲಗಳಿಂದ 30 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿದ್ದರು.
ಒಲಂಪಿಕ್ಸ್‌ನಲ್ಲಿ ಒಟ್ಟು ಎಂಟು ಚಿನ್ನದ ಪದಕ ಗೆದ್ದಿರುವ ಬೋಲ್ಟ್, ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಏಕೈಕ ಓಟಗಾರ ಎನಿಸಿಕೊಂಡಿದ್ದಾರೆ. ಅವರು 2008, 2012 ಮತ್ತು 2016 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ 100 ಮೀ ಮತ್ತು 200 ಮೀ ಓಟದಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.