Kannada News Photo gallery 26 flips under water in 37 seconds: A boy from Mangaluru created a world record, Karnataka news in kannada
37 ಸೆಕೆಂಡ್ನಲ್ಲಿ ನೀರೊಳಗೆ 26 ಪಲ್ಟಿ: ವಿಶ್ವ ದಾಖಲೆ ಸೃಷ್ಟಿಸಿದ ಮಂಗಳೂರಿನ ಬಾಲಕ
ಈಜುಕೊಳದೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್‌ಗಳಲ್ಲಿ 26 ಸೋಮರ್‌ಸಾಲ್ಟ್ಸ್ ಅಂದ್ರೆ ಪಲ್ಟಿ ಹೊಡೆಯುವ ಮೂಲಕ 13ರ ಬಾಲಕ ಹ್ಯಾಡ್ರಿಯನ್ ವೇಗಸ್ ನೊಬೆಲ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. ಆ ಮೂಲಕ ಈ ಸಾಹಸ ಇದೇ ಪ್ರಥಮ ದಾಖಲೆಯಾಗಿದೆ. ಬಾಲಕನ ಈ ಸಾಹಸಕ್ಕೆ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕೊಳ ಸಾಕ್ಷಿಯಾಗಿತ್ತು.
1 / 6
ಹದಿಹರೆಯದ ವಯಸ್ಸಲ್ಲಿ ಸ್ನೇಹಿತರ ಜೊತೆ ಈಜಾಡಿ ಮಜಾ ಮಾಡುವುದು ಎಲ್ಲರಿಗೂ ಇಷ್ಟ. ಆದರೆ ಇಲ್ಲೊಬ್ಬ ಬಾಲಕ ಈಜನ್ನು ಕೇವಲ ಮಜವಾಗಿ ಮಾತ್ರ ತೆಗೆದುಕೊಳ್ಳದೆ ನೊಬೆಲ್ ವಲ್ಡ್ ರೆಕಾರ್ಡ್ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಹ ಸಾಧನೆ ಮಾಡಿದ್ದಾನೆ. ಇಷ್ಟಕ್ಕೂ ಆ ಬಾಲಕ ಯಾರು? ಆತನ ಸಾಧನೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
2 / 6
ಹೆಚ್ಚಿನ ಮಂದಿಗೆ ನೀರು ಅಂದ್ರೆ ಭಯ. ಆ ಭಯವನ್ನ ಹೋಗಲಾಡಿಸಲು ಈಜು ತರಬೇತಿ ಪಡೆಯುತ್ತಾರೆ. ಆದರೆ ಮಂಗಳೂರಿನ ಬಾಲಕ ಕೇವಲ ಈಜು ಕಲಿತಿದ್ದು ಮಾತ್ರ ಅಲ್ಲದೆ, ನೀರಿನಲ್ಲಿ ಪಲ್ಟಿ ಹೊಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
3 / 6
ಮಂಗಳೂರಿನ 13 ವರ್ಷದ ಬಾಲಕ ಹ್ಯಾಡ್ರಿಯನ್ ವೇಗಸ್ ಈ ದಾಖಲೆ ನಿರ್ಮಿಸಿದ ಪೋರ. ಈತನ ಈ ಸಾಹಸ ಕಂಡು ನೆರೆದವರೆಲ್ಲರೂ ಚಕಿತರಾಗಿದ್ದಾರೆ. ಘಟಾನುಘಟಿ ಈಜು ಪಟುಗಳಿಗೂ ಸಾಧ್ಯವಾಗದ ಸಾಧನೆಯನ್ನ 13 ವರ್ಷದ ಬಾಲಕ ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ಈತನ ಈ ಸಾಧನೆಗೆ ಇಂದು ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕೊಳ ಸಾಕ್ಷಿಯಾಗಿತ್ತು.
4 / 6
ಮಂಗಳೂರಿನ ಈಜುಕೊಳದ ನೀರೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್‌ಗಳಲ್ಲಿ 26 ಸೋಮರ್‌ಸಾಲ್ಟ್ಸ್ ಅಂದ್ರೆ ಪಲ್ಟಿ ಹೊಡೆಯುವ ಮೂಲಕ ಹ್ಯಾಡ್ರಿಯನ್ ವೇಗಸ್ ನೊಬೆಲ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. 15 ವರ್ಷದೊಳಗೆ ಈ ನೀರೊಳಗಿನ ಪಲ್ಟಿ ಸಾಹಸ ಇದೇ ಪ್ರಥಮ ದಾಖಲೆಯಾಗಿದೆ.
5 / 6
ಈ ಹಿಂದೆ ಮಂಗಳೂರಿನ ಖ್ಯಾತ ಈಜುಪಟು ಚಂದ್ರಶೇಖರ ರೈ ಎಂಬುವವರು ಹಿರಿಯರ ವಿಭಾಗದಲ್ಲಿ ನೀರೊಳಗೆ 1 ನಿಮಿಷ 2 ಸೆಕೆಂಡ್ಸ್‌ನಲ್ಲಿ 28 ಪಲ್ಟಿ ಹೊಡೆದಿರುವ ದಾಖಲೆ ಮಾಡಿದ್ದರು. ಆದರೆ ವಯಸ್ಸಿನಲ್ಲಿ ಕಿರಿಯನಾಗಿದ್ದರೂ ಹ್ಯಾಡ್ರಿಯನ್ ಆ ರೆಕಾರ್ಡ್ ಅನ್ನೂ ಬ್ರೇಕ್ ಮಾಡಿದ್ದಾನೆ. ಸಾಮಾನ್ಯವಾಗಿ ಈಜುಕೊಳದ ಅಂಚು ಹಿಡಿದುಕೊಂಡು ಪಲ್ಟಿ ಹಾಕಲಾಗುತ್ತದೆ. ಆದರೆ ಈಜುಕೊಳದ ಮಧ್ಯ ನೀರಿನಲ್ಲಿ ಏಕಕಾಲಕ್ಕೆ 26 ಪಲ್ಟಿ ಹೊಡೆಯುವುದು ಸುಲಭದ ಮಾತಲ್ಲ. ಸಾಕಷ್ಟು ತರಬೇತಿ, ಪ್ರಯತ್ನ ಮುಖ್ಯ.
6 / 6
ಬೇಸಿಗೆ ರಜೆಯ ವೇಳೆ ಹ್ಯಾಡ್ರಿಯನ್‌ನ ಪ್ರತಿಭೆಯನ್ನು ಆತನ ಸ್ವಿಮ್ಮಿಂಗ್ ಕೋಚ್ ಅರೋಮಲ್ ಎ.ಎಸ್ ಗಮನಿಸಿದ್ದಾರೆ. ಬಳಿಕ ಆತನಿಗೆ ವಿಶೇಷ ರೀತಿಯ ತರಬೇತಿ ನೀಡಲಾಗಿತ್ತು. ನಗರದ ಪ್ರೆಸ್ಟೀಜ್ ಅಂತಾರಾಷ್ಟ್ರೀಯ ಶಾಲೆಯ ಈಜುಕೊಳದಲ್ಲಿ ತರಬೇತಿ ನೀಡಲಾಗಿದ್ದು, ಬಳಿಕ ಎಮ್ಮೆಕೆರೆ ಈಜುಕೊಳದಲ್ಲೂ ತರಬೇತಿ ಮುಂದುವರಿಸಲಾಯಿತು. ಕಳೆದ ಸುಮಾರು 10 ತಿಂಗಳ ಕಠಿಣ ಪ್ರಯತ್ನದಿಂದ ಈ ದಾಖಲೆ ಸಾಧ್ಯವಾಗಿದೆ ಎಂದು ಹ್ಯಾಡ್ರಿಯನ್‌ನ ಸ್ವಿಮ್ಮಿಂಗ್ ಕೋಚ್ ಅರೋಮಲ್ ಹೇಳುತ್ತಾರೆ.