
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಐಪಿಎಸ್ ಅಧಿಕಾರಿ ಡಿ.ಎಲ್.ನಾಗೇಶ್‌ರನ್ನು ರಾಜ್ಯಸರ್ಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.

ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು(ಬುಧವಾರ) ಐಪಿಎಸ್ ಅಧಿಕಾರಿ ಡಿ.ಎಲ್.ನಾಗೇಶ್‌ರನ್ನು ವಿಶೇಷವಾಗಿ ಬೀಳ್ಕೊಟ್ಟರು.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ನಾಗೇಶ್ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೇ, ಯಾರ ಹಂಗು ಇಲ್ಲದೇ, ತಮಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಇದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಇದೇ ಪ್ರಥಮ ಬಾರಿಗೆ ಓರ್ವ ವರ್ಗಾವಣೆಗೊಂಡ ಎಸ್ಪಿಗೆ ಹೂಮಳೆಗೈದು ಜೈಕಾರ ಹಾಕಿ ಬೀಳ್ಕೊಟ್ಟಿದ್ದಾರೆ.

ಅಷ್ಟೇ ಅಲ್ಲ, ಅವರ ಕಾರಿನಲ್ಲೆ ಹತ್ತಿಸಿ, ಕಾರಿನ ಎರಡೂ ಬದಿಯಲ್ಲಿ ನಿಂತು ಸೆಲ್ಯೂಟ್ ಹೊಡೆಯುವುದರ ಮೂಲಕ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.

ಸಾದಾ ಸೀದ ನೇರನುಡಿಯಿಂದ ಕರ್ತವ್ಯದಲ್ಲಿ ಜನಮನ್ನಣೆ ಪಡೆದಿದ್ದ ಎಸ್ಪಿ ಡಿ.ಎಲ್. ನಾಗೇಶ್ ಅವರನ್ನು ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯವರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.