
‘ಗುಳ್ಟು’ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ನವೀನ್ ಶಂಕರ್ ಹಾಗೂ ಜನಪ್ರಿಯ ನಟಿ ಐಶಾನಿ ಶೆಟ್ಟಿ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ‘ಮಾತು ಮಾತಲ್ಲೇ..’ ಹಾಡು ಗಮನ ಸೆಳೆಯುತ್ತಿದೆ. ಈ ಮೆಲೋಡಿಯಸ್ ಗೀತೆಗೆ ಪ್ರೇಕ್ಷಕರು ತಲೆದೂಗುತ್ತಿದ್ದಾರೆ.

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ‘ಮಾತು ಮಾತಲ್ಲೇ..’ ಹಾಡಿಗೆ ಧ್ವನಿ ನೀಡಿದ್ದಾರೆ. ಅವರ ಕಂಠದಲ್ಲಿ ಈ ಹಾಡು ಸುಮಧುರವಾಗಿ ಮೂಡಿಬಂದಿದೆ. ನವೀನ್ ಶಂಕರ್ ಹಾಗೂ ಐಶಾನಿ ಶೆಟ್ಟಿ ಅವರ ಕೆಮಿಸ್ಟ್ರಿ ಕೂಡ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಇವರಿಬ್ಬರು ಜೋಡಿ ಆಗಿದ್ದಾರೆ.

ಹಲವು ಸೂಪರ್ ಹಿಟ್ ಗೀತೆಗಳನ್ನು ಬರೆದಿರುವ ಗೌಸ್ ಪೀರ್ ಅವರು ‘ಮಾತು ಮಾತಲ್ಲಿ..’ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಸಿದ್ಧವಾಗಿದೆ.

ಈ ಮೊದಲು ಪುರಿ ಜಗನ್ನಾಥ್ ಜೊತೆ ಕೆಲಸ ಮಾಡಿದ್ದ ಶ್ರೀಧರ್ ಷಣ್ಮುಖ ಅವರು ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಬಂಡವಾಳ ಹೂಡಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಹಣ, ಗೌಸ್ ಪೀರ್, ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಟೈಟಲ್ ಮೂಲಕ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರ ಕೌತುಕ ಮೂಡಿಸಿದೆ. ಈ ಸಿನಿಮಾದಲ್ಲಿ ನಿರ್ದೇಶಕರು ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಸದ್ಯ ಈ ಚಿತ್ರದ ಹಾಡು ಸದ್ದು ಮಾಡುತ್ತಿದೆ.
Published On - 3:08 pm, Sun, 8 May 22