- Kannada News Photo gallery As ITR filing deadline ended, know what are next steps and consequences, details in Kannada
ಜುಲೈ 31ರ ಐಟಿಆರ್ ಡೆಡ್ಲೈನ್ ಮುಗೀತು; ಫೈಲಿಂಗ್ ಮಾಡಿರದಿದ್ದರೆ ಮುಂದೇನು?
ನವದೆಹಲಿ, ಆಗಸ್ಟ್ 1: 2023-24ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಲು ಜುಲೈ 31ಕ್ಕೆ ನಿಗದಿ ಮಾಡಲಾಗಿದ್ದ ಡೆಡ್ಲೈನ್ ಮುಗಿದುಹೋಗಿದೆ. ನಿರೀಕ್ಷೆಯಂತೆ ಗಡುವನ್ನು ವಿಸ್ತರಿಸಲಾಗಿಲ್ಲ. ಒಂದು ವೇಳೆ ನೀವು ಗಡುವಿನ ಒಳಗೆ ಐಟಿಆರ್ ಸಲ್ಲಿಸದೇ ಇದ್ದರೆ ಏನಾಗುತ್ತದೆ? ಮುಂದೇನು ಮಾಡಬಹುದು ಎನ್ನುವ ಮಾಹಿತಿ ಈ ಫೋಟೋ ಸ್ಟೋರಿಯಲ್ಲಿದೆ.
Updated on: Aug 01, 2024 | 12:19 PM

ಆಡಿಟಿಂಗ್ ಮಾಡುವ ಅಗತ್ಯ ಇರುವ ಖಾತೆಗಳನ್ನು ಹೊಂದಿರುವ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಬಹುತೇಕ ಎಲ್ಲರಿಗೂ ಐಟಿಆರ್ ಸಲ್ಲಿಕೆ ಜುಲೈ 31 ಡೆಡ್ಲೈನ್ ಆಗಿತ್ತು. ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜುಲೈ 31ರ ಸಂಜೆ 7 ಗಂಟೆಯವರೆಗೂ 7 ಕೋಟಿಗೂ ಹೆಚ್ಚು ಜನರು ಐಟಿಆರ್ ಸಲ್ಲಿಕೆ ಮಾಡಿದ್ದಾರೆ.

ಜುಲೈ 31ರ ಗಡುವು ಮುಗಿದ ಬಳಿಕವೂ ಐಟಿಆರ್ ಸಲ್ಲಿಕೆ ಮಾಡಬಹುದೆ? ಹೌದು, ರಿಟರ್ನ್ಸ್ ಫೈಲ್ ಮಾಡಬಹುದು. ಬಿಲೇಟೆಡ್ ರಿಟರ್ನ್ ಸಲ್ಲಿಸಬಹುದು. ಆದರೆ, ನಿರ್ದಿಷ್ಟ ಲೇಟ್ ಫೀ ಪಾವತಿಸಬೇಕಾಗುತ್ತದೆ. ಈ ಬಿಲೇಟೆಡ್ ರಿಟರ್ನ್ಗೂ ಒಂದು ಡೆಡ್ಲೈನ್ ಇರುತ್ತದೆ. ಡಿಸೆಂಬರ್ 31ರೊಳಗೆ ನೀವು ಐಟಿ ರಿಟರ್ನ್ಸ್ ಫೈಲ್ ಮಾಡಬಹುದು.

5,000 ರೂವರೆಗೂ ದಂಡ: ಜುಲೈ 31ರ ಗಡುವಿನೊಳಗೆ ನೀವು ಐಟಿಆರ್ ಸಲ್ಲಿಸದಿದ್ದರೆ ಡೀಫಾಲ್ಟ್ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಐಟಿ ಸೆಕ್ಷನ್ 139(1) ಅಡಿಯಲ್ಲಿ ಲೇಟ್ ಫೀ ಆಗಿ 5,000 ರೂ ಹಣವನ್ನು ಪಡೆಯಲಾಗುತ್ತದೆ. ಐದು ಲಕ್ಷ ರೂ ಒಳಗಿನ ಆದಾಯ ಇದ್ದರೆ ಈ ಲೇಟ್ ಫೀ 1,000 ರೂ ಇರುತ್ತದೆ.

ವಿಳಂಬ ಸಲ್ಲಿಕೆ ಶುಲ್ಕ ಅಥವಾ ಲೇಟ್ ಫೀ ಜೊತೆಗೆ ಬಡ್ಡಿ ಸಮೇತ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ನೀವು ಪಾವತಿಸಬೇಕಾದ ತೆರಿಗೆ ಮೊತ್ತಕ್ಕೆ ಜುಲೈ 31ರಿಂದ ತಿಂಗಳಿಗೆ ಶೇ. 1ರಂತೆ ಬಡ್ಡಿ ವಿಧಿಸಲಾಗುತ್ತದೆ. ಇಷ್ಟಕ್ಕೇ ಮುಗಿಯುವುದಿಲ್ಲ ಈ ಕರ್ಮಕಾಂಡ... ಮುಂದಿದೆ ಇನ್ನಷ್ಟು ಮಾಹಿತಿ...

ಜುಲೈ 31ರೊಳಗೆ ನೀವು ಐಟಿಆರ್ ಸಲ್ಲಿಸಿದ್ದರೆ ಆಸ್ತಿ ವಹಿವಾಟಿನಲ್ಲಿ ಆದ ನಷ್ಟವನ್ನು ಮುಂದಿನ ಹಣಕಾಸು ವರ್ಷಕ್ಕೆ ಕ್ಯಾರಿಫಾರ್ವರ್ಡ್ ಮಾಡಬಹುದಿತ್ತು. ಈಗ ಅದು ಸಾಧ್ಯವಾಗುವುದಿಲ್ಲ. ಮನೆ ಅಥವಾ ನಿವೇಶನ ಮಾರಾಟದಿಂದ ಆದ ನಷ್ಟವನ್ನು ಮಾತ್ರ ಮುಂದಕ್ಕೆ ಕೊಂಡೊಯ್ಯಲು ಸಾಧ್ಯ. ಷೇರು ಇತ್ಯಾದಿ ವಹಿವಾಟಿನಿಂದ ಆದ ನಷ್ಟವನ್ನು ಮುಂದಕ್ಕೆ ಸಾಗಿಸಲು ಆಗೋದಿಲ್ಲ.

ಸೆಕ್ಷನ್ 276ಸಿಸಿ ಅಡಿಯಲ್ಲಿ ಜುಲೈ 31ರ ಗಡುವಿನೊಳಗೆ ಐಟಿಆರ್ ಸಲ್ಲಿಸದೇ ಇರುವವರು, ಅವರು ಪಾವತಿಸಬೇಕಾದ ತೆರಿಗೆ ಹಣ 25,000 ರೂಗಿಂತ ಹೆಚ್ಚಾಗಿದ್ದರೆ ದಂಡ, ಬಡ್ಡಿ ಜೊತೆಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗಬಹುದು.














