ಇಂದು ಬೆಂಗಳೂರಿಗೆ ಭೇಟಿ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ದೇವನಹಳ್ಳಿ ರೈಲ್ವೆ ನಿಲ್ದಾಣದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದ ತನಕ ನಡೆಸಲಾಗುತ್ತಿರುವ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಸಚಿವ ಅಶ್ವಿನಿ ವೈಷ್ಣವ್ಗೆ ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ಸಂಸದ ಪಿಸಿ ಮೋಹನ್ ಮತ್ತು ರೈಲ್ವೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಿನಿ ವೈಷ್ಣವ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಲಹಂಕವರೆಗೆ ರೈಲ್ವೆ ಲೈನ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ಕಂಟೊನ್ಮೆಂಟ್ ಬಹಳ ಮಹತ್ವದ ನಿಲ್ದಾಣ. ಎಸ್ಎಂವಿ ಬಳಿಕ ಕಂಟೋನ್ಮೆಂಟ್, ಯಶವಂತಪುರ ರೈಲ್ವೆ ನಿಲ್ದಾಣ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 18 ಸಾವಿರ ಸ್ಕ್ವೇರ್ ಮೀಟರ್ ಅಗಲೀಕರಣ ಮಾಡಲಾಗಿದೆ. ಅಂಡರ್ ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಡಿಸೆಂಬರ್ ಕೊನೆಗೆ ಕಾಮಗಾರಿ ಸಂಪೂರ್ಣ ಆಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಮೈಸೂರು ಟು ಬೆಂಗಳೂರು ನಡುವೆ ನಮೋ ರ‍್ಯಾಪಿಡ್ ರೈಲು ಓಡಾಟ ಮಾಡುತ್ತಿದೆ. ಇದೀಗ ತುಮಕೂರು ಟು ಬೆಂಗಳೂರು ನಮೋ ರ‍್ಯಾಪಿಡ್ ರೈಲು ಆರಂಭ ಮಾಡುತ್ತೇವೆ. ಬೆಂಗಳೂರು ಸಿಟಿಗೆ 200ಕಿಮೀ ಇರುವ ಪ್ರಮುಖವಾದ ನಗರಗಳಿಗೆ ನಮೋ ರ‍್ಯಾಪಿಡ್ ರೈಲು ಸದ್ಯದಲ್ಲಿ ಆರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.