ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ಹಾಗೂ ಕನಕರಾಯ ದೇವಸ್ಥಾನದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಬರುವ ಭಕ್ತರು ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಮಾಡಿಸಿ, ತೀರ್ಥ ಸೇವನೆ ಮಾಡುವುದು ವಿಶೇಷ.
ಅಂದಾಜು 600 ವರ್ಷಗಳ ಇತಿಹಾಸ ಇರುವ ಈ ಲಕ್ಷ್ಮೀ ರಂಗನಾಥ ದೇವಸ್ಥಾನದ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಹರಕೆ ತೀರಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮದ್ಯದ ಬಾಟಲಿ ತಂದು ಪೂಜೆ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಬಿರು ಬಿಸಿಲನ್ನೂ ಲೆಕ್ಕಿಸದ ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಲಕ್ಷ್ಮಿರಂಗನಾಥ ದೇವರಿಗೆ ಮದ್ಯದ ನೈವೇದ್ಯ ಅರ್ಪಿಸಿ ಪುನೀತರಾದರು. ಎಲ್ಲ ಕಡೆ ಹಣ್ಣು ಕಾಯಿ ಅರ್ಪಿಸುತ್ತೇವೆ ಇಲ್ಲಿ ಸಾರಾಯಿ ನೈವೇದ್ಯವಿದೆ ಇದು ವಿಶೇಷ ದೇಗುಲವೆಂದು ಅಚ್ಚರಿ ವ್ಯಕ್ತಪಡಿಸಿದರು.
ರಂಗನಾಥನ ನೈವೇದ್ಯ ಈ ರೀತಿಯಾದರೆ, ಕನಕರಾಯ ದೇವರಿಗೂ ಎಣ್ಣೆಯೇ ನೈವೇದ್ಯ. ಅಲ್ಲಿಗೆ ಬಂದ ಭಕ್ತರಿಗೂ ಸಾರಾಯಿಯೇ ತೀರ್ಥ. ಕನಕರಾಯ ದೇವಸ್ಥಾನದ ಮುಂದೆಯಂತೂ ಕಳ್ಳಬಟ್ಟಿ ಸಾರಾಯಿ ಪ್ಯಾಕೆಟ್ನ್ನು ರಾಶಿ ರಾಶಿಯಾಗಿಟ್ಟು ಮಾರಾಟ ಮಾಡ್ತಿದ್ದರು. ಅದನ್ನು ಭಕ್ತರು ಕನಕರಾಯನಿಗೆ ಅರ್ಪಿಸಿ ತೀರ್ಥ ಅಂತ ಸೇವಿಸುತ್ತಿದ್ದರು. ದೇವರಿಗೆ ಎಣ್ಣೆ ಕಾಣಿಕೆ ಸಲ್ಲಿಸುವುದು ಅಂತ ಜನರು ಹೇಳಿದರೂ ದೇವಸ್ಥಾನದ ಭಕ್ತರು ಮಾತ್ರ ಅದು ತೀರ್ಥ ಅಂತಾರೆ.
ತಮ್ಮ ಬೇಡಿಕೆ ಈಡೇರಿದರೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಿರುತ್ತಾರಂತೆ. ಅದರಂತೆ ಜಾತ್ರೆಯ ಸಮಯಕ್ಕೆ ಬಂದು ಎಣ್ಣೆ ಕಾಣಿಕೆ ನೀಡಿ ತೀರ್ಥ ಸೇವನೆ ಮಾಡಿ ಹೋಗುತ್ತಾರೆ. ಕೆಲವರು ಹರಕೆ ತೀರಿಸೋಕೆ ಅಂತ ಮದ್ಯ ನೈವೇದ್ಯ ಅರ್ಪಿಸಿದರೆ ಕೆಲವರು ಹರಕೆ ಹೊರದಿದ್ದರೂ ಸಾಮಾನ್ಯವಾಗಿ ಎಲ್ಲ ನೈವೇದ್ಯದ ಜೊತೆಗೆ ಸಾರಾಯಿ ನೈವೇದ್ಯ ಅರ್ಪಿಸುತ್ತಾರೆ.
ಇದರಿಂದ ತಮಗೆ ಒಳ್ಳೆಯದು ಆಗುತ್ತೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಜಾತ್ರೆ ಬಂತೆಂದರೆ ಸಾಕು ದೇವಸ್ಥಾನದ ಆವರಣ, ಗರ್ಭಗುಡಿ ಎಲ್ಲೆಂದರಲ್ಲಿ ಎಣ್ಣೆ ಬಾಟಲಿಗಳೇ ರಾರಾಜಿಸುತ್ತವೆ. ಮಕ್ಕಳಿಲ್ಲದವರು, ಕೌಟುಂಬಿಕ ಸಮಸ್ಯೆ, ವೈವಾಹಿಕ ಸಮಸ್ಯೆ, ಆಸ್ತಿ ವಿವಾದ ಹೀಗೆ ಹಲವಾರು ಸಮಸ್ಯೆ ಎದುರಿಸುವ ಭಕ್ತರು ಎಣ್ಣೆ ಹರಕೆ ಈಡೇರಿಸಿದರೆ ಒಳ್ಳೆಯದಾಗುತ್ತದೆ ಎಂಬುದು ನಂಬಿಕೆ.
ಸಾರಾಯಿ ಅರ್ಪಿಸಿದರೆ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ.ಇದರಿಂದ ಇಂದಿಗೂ ಸಾರಾಯಿ ನೈವೇದ್ಯ ಪದ್ದತಿ ಮುಂದುವರೆಯುತ್ತಲೇ ಸಾಗುತ್ತಿದೆ. ಅದೇನೆ ಇದ್ದರೂ ಎಲ್ಲವೂ ಭಕ್ತರ ನಂಬಿಕೆ ಮೇಲೆ ನಿಂತಿದ್ದು, ಇದೊಂದು ವಿಭಿನ್ನ ವಿಶೇಷ ದೇವಸ್ಥಾನ ಹಾಗೂ ವಿಚಿತ್ರ ಪದ್ಧತಿ ಎಂಬುದು ಮಾತ್ರ ನಿಜ.