
ಗಣರಾಜ್ಯೋತ್ಸವ ಅಂಗವಾಗಿ ಇಂದಿನಿಂದ (ಜ.14) ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದೆ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಆಧಾರಿತ "ತೇಜಸ್ವಿ ವಿಸ್ಮಯ" ಥೀಮ್‌ನಲ್ಲಿ ಈ ಬಾರಿ ಗಾಜಿನ ಮನೆ ಅಲಕೃತಗೊಂಡಿದೆ. ಚಂದದ ಹೂಗಳೊಂದಿಗೆ ಅಂದದ ಜೀವನಗಾಥೆ ಹೊತ್ತ ಫಲಪುಷ್ಪ ಪ್ರದರ್ಶನದ ಕಿರು ನೋಟ ಇಲ್ಲಿದೆ.

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜನೆಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ತೋಟಗಾರಿಕಾ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಸಸಿಗೆ ನೀರು ಹಾಕುವ ಮೂಲಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ.

ಜನವರಿ 14 ರಿಂದ 26ರವರೆಗೆ ನಡೆಯಲಿರುವ 219ನೇ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಈ ಬಾರಿ ರಾಷ್ಟ್ರಕವಿ ಕುವೆಂಪು ಅವರ ಪುತ್ರ, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ವಿಷಯ ಆಯ್ಕೆ ಮಾಡಿಕೊಂಡಿದೆ. ಗಾಜಿನ ಮನೆಯ ಅಂಗಳದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ನೆಚ್ಚಿನ ಕಾಡನ್ನು ನಿರ್ಮಿಸಿಲಾಗಿದೆ.

ತಮಿಳುನಾಡು, ಕೇರಳ, ಮಹಾರಾಷ್ಟ, ಡಾರ್ಜಿಲಿಂಗ್, ವಯನಾಡು ಕಡೆಯಿಂದ 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 35 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗಿದೆ.

ತೇಜಸ್ವಿ ಅವರ ಕಾದಂಬರಿ, ಕಥೆಗಳಲ್ಲಿ ಕಂಡುಬರುವ ಕಾಡಿನ ಮಾದರಿಯನ್ನು ಗಾಜಿನ ಮನೆಯಲ್ಲಿ ನಿರ್ಮಿಸಲಾಗಿದೆ. 25 ಅಡಿ ಎತ್ತರದ ಬೃಹತ್ ಬೆಟ್ಟ, ಜಲಪಾತದ ಆಕರ್ಷಣಿಯವಾಗಿದೆ. ಅದರ ತಪ್ಪಲಿನಲ್ಲಿ ತೇಜಸ್ವಿ ಅವರ ಮೂಡಿಗೆರೆಯ ಹ್ಯಾಂಡ್‌ಪೋಸ್ಟ್ ಸಮೀಪವಿರುವ 'ನಿರುತ್ತರ' ಮನೆಯನ್ನು ಹೂಗಳಿಂದ ನಿರ್ಮಿಸಲಾಗಿದೆ.

ತೇಜಸ್ವಿ ವಿಸ್ಮಯ ಲೋಕವನ್ನು ಪೂರ್ಣ ಚಂದ್ರ ತೇಜಸ್ವಿ ಅವರ ಪುತ್ರಿಯರು ಕಣ್ತುಂಬಿಕೊಂಡರು. ಈ ಫ್ಲವರ್ ಶೋ ತಂದೆಯವರ ನೆನಪುಗಳನ್ನು ಮೆಲಕು ಹಾಕುವಂತೆ ಮಾಡಿದೆ ಅಂತ ಸಂತಸ ವ್ಯಕ್ತಪಡಿಸಿದರು.

13 ದಿನಗಳ ಕಾಲ ನಡೆಯಲಿರುವ ಈ ಫ್ಲವರ್ ಶೋಗೆ ವಯಸ್ಕರಿಗೆ 80 ರೂ ಹಾಗೂ ಕಿರಿಯರಿಗೆ 30 ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ. ಪೂರ್ಣ ಚಂದ್ರ ತೇಜಸ್ವಿ ಅವರ ವಿಸ್ಮಿತ ಜಗತ್ತನ್ನು ಹೊತ್ತು ಫಲಪುಷ್ಪ ಪ್ರದರ್ಶನ ನಿಮಗಾಗಿ ಕಾದು ನಿಂತಿದೆ.
Published On - 9:26 pm, Wed, 14 January 26