‘777 ಚಾರ್ಲಿ’ ಸಿನಿಮಾ ಜೂನ್ 10ರಂದು ರಿಲೀಸ್ ಆಗಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಿಸಿದ್ದಾರೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ಬಲ ಸಿಕ್ಕಂತೆ ಆಗಿದೆ.
ಸಿಎಂ ಬೊಮ್ಮಾಯಿ ಅವರು ಈ ಮೊದಲಿನಿಂದಲೂ ಚಿತ್ರರಂಗಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಸಾಕಷ್ಟು ಸಿನಿಮಾ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದಿದೆ. ಈಗ ‘777 ಚಾರ್ಲಿ’ ಚಿತ್ರವನ್ನು ಅವರು ವೀಕ್ಷಿಸಿದ್ದಾರೆ.
ಇಂದು (ಜೂನ್ 13) ಬೆಂಗಳೂರಿನ ಒರಾಯನ್ ಮಾಲ್ನ ಪಿವಿಆರ್ನಲ್ಲಿ ‘777 ಚಾರ್ಲಿ’ ಚಿತ್ರವನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಬಿ.ಸಿ. ನಾಗೇಶ್, ಶಾಸಕ ರಘುಪತಿ ಭಟ್, ನಾಯಕ ರಕ್ಷಿತ್ ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು.
‘777 ಚಾರ್ಲಿ’ ಸಿನಿಮಾ ಭಾವನಾತ್ಮಕವಾಗಿದೆ. ಹೀಗಾಗಿ, ಅನೇಕರು ಸಿನಿಮಾ ವೀಕ್ಷಿಸಿ ಕಣ್ಣಿರು ಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.