
ಇಂದು ವಿಶ್ವವಿಖ್ಯಾತ ಬೆಂಗಳೂರು ಹಸಿ ಕರಗ ಶಕ್ತ್ಯೋತ್ಸವ ಆಚರಣೆ ಮಾಡಲಾಯಿತು. ಬಿಬಿಎಂಪಿ ಪ್ರಧಾನ ಕಚೇರಿ ಆವರಣದಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಸಿ ಕರಗ ಹೊರತರಲಾಯಿತು. 15ನೇ ಬಾರಿಗೆ ಅರ್ಚಕ ಎ.ಜ್ಞಾನೇಂದ್ರ ಸ್ವಾಮಿ ಹಸಿ ಕರಗ ಹೊತ್ತಿದ್ದಾರೆ.

ಬೆಂಗಳೂರಿನ ಸಂಪಂಗಿರಾಮನಗರದಲ್ಲಿರುವ ಕರಗದ ಕುಂಟೆಯಲ್ಲಿ ಹಸಿ ಕರಗ ಶಕ್ತ್ಯೋತ್ಸವ ಆಚರಿಸಲಾಗಿದೆ. ಇಂದು ತಿಗಳ ಸಮಾಜದ ಆರಾಧ್ಯ ದೇವತೆ ದ್ರೌಪದಿ ದೇವಿಯೂ ಭೂಮಿಗಿಳಿದು ಹಸಿ ಕರಗದ ರೂಪದಲ್ಲಿ ಬರುತ್ತಾಳೆ ಎಂಬ ನಂಬಿಕೆ ಇದೆ.

ಕರಗದ ಕುಂಟೆಯಿಂದ ಹೊರಬಂದ ದ್ರೌಪದಿ ದೇವಿ ಹಸಿಕರಗ, ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ದರ್ಶನ ನೀಡಲಾಯಿತು. ಈ ವೇಳೆ ಭಕ್ತರು 50 ಕೆಜಿ ತೂಕದ ಕರ್ಪೂರ ಹಚ್ಚಿ ದೇವಿಗೆ ಸಮರ್ಪಣೆ ಮಾಡಿದರು.

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿರುವ ಆದಿಶಕ್ತಿ ದೇವಾಯಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಹಸಿ ಕರಗವನ್ನಿಟ್ಟು ಇಂದು ಮತ್ತು ನಾಳೆ ಪೂಜೆ ಸಲ್ಲಿಸಲಾಗುತ್ತದೆ.

ಶನಿವಾರ ಮಧ್ಯರಾತ್ರಿ ಚೈತ್ರ ಪೌರ್ಣಮಿಯಂದು ಪೇಟೆ ಕರಗ (ಹೂವಿನ ಕರಗ) ದೇವಾಲಯದಿಂದ ಹೊರಗೆ ಬರಲಿದ್ದು, ನಗರದ ಸುಮಾರು 25ಕ್ಕೂ ಪೇಟೆಗಳನ್ನು ಸುತ್ತುವ ಮೂಲಕ ದ್ರೌಪದಿ ದೇವಿ ಭಕ್ತರಿಗೆ ದರ್ಶನ ನೀಡಲಿದೆ.
Published On - 11:28 am, Fri, 11 April 25