Namma Jatre: ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’ಮೆರಗು, ವಿಧಾನಸೌಧದ ಮುಂದೆ ಜಾನಪದ ಕಲೆಯ ಅನಾವರಣ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾನುವಾರ ಮತ್ತು ಸೋಮವಾರ ‘ನಮ್ಮ ಜಾತ್ರೆ’ ಹಮ್ಮಿಕೊಂಡಿದೆ. .ನಮ್ಮ ಜಾತ್ರೆಯ ಮೊದಲ ದಿನವೇ ಸಾವಿರಾರು ಜನರು ಸಾಂಸ್ಕೃತಿಕ ರಸದೌತದನದ ಸಿಹಿ ಸವಿದ್ರು. ವಿಧಾನಸೌಧದ ಅಂಗಳ ಕಲಾ ವೈಭವಕ್ಕೆ ಸಾಕ್ಷಿಯಾಗಿದೆ.
Updated on:Dec 11, 2023 | 7:50 AM

ಡಿ.10ರ ಭಾನುವಾರ ಶಕ್ತಿ ಕೇಂದ್ರದ ಮುಂದೆ ಸಾಂಸ್ಕೃತಿಕ ಲೋಕವೇ ಅರಳಿಕೊಂಡಿತ್ತು. ಕಲಾ ಕ್ಷೇತ್ರದ ನೆಲ ಕಲಾ ವೈಭವಕ್ಕೆ ಸಾಕ್ಷಿಯಾಗಿತ್ತು. ನೃತ್ಯ ಕಣ್ಮನ ಸೆಳೆದರೆ, ಹುಲಿ ಕುಣಿತ ರೋಮಾಂಚನಗೊಳ್ಳುವಂತೆ ಮಾಡಿತ್ತು. ಲಂಬಾಣಿ ಕುಣಿತ ಕಣ್ಣಿಗೆ ಮುದ ನೀಡಿದ್ರೆ, ವಿವಿಧ ವೇಷಧಾರಿಗಳ ಹೆಜ್ಜೆ ಸಾಂಸ್ಕೃತಿಕ ಲೋಕಕ್ಕೆ ಮತ್ತಷ್ಟು ಮೆರುಗು ತುಂಬಿತ್ತು..

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ‘ನಮ್ಮ ಜಾತ್ರೆ’ ಹಮ್ಮಿಕೊಂಡಿದೆ, ಮೊದಲ ದಿನ ನಮ್ಮ ಜಾತ್ರೆ ಹಬ್ಬ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಈ ಜಾತ್ರೆಯನ್ನು ಚಲನಚಿತ್ರ ನಟಿ ಲೀಲಾವತಿ ಅವರ ನಿಧನದಿಂದ ಒಂದು ದಿನ ಮುಂದೂಡಲಾಗಿತ್ತು.

ಅನ್ ಬಾಕ್ಸಿಂಗ್ ಬಿಎಲ್ಆರ್ ಹಬ್ಬ’ದ ಅಡಿ ಈ ಜಾತ್ರೆ ಆಯೋಜಿಸಲಾಗಿದ್ದು, ನಮ್ಮ ಜಾತ್ರೆಗೆ ವಿಧಾನಸೌಧದ ಮುಂದೆ ಹಸಿರು ನಿಶಾನೆ ತೋರಿಸಿದ್ರು. ಕಾರ್ಯಕ್ರಮಕ್ಕೆ ತಾರಾ ಮೆರುಗು ಕೂಡ ಸಿಕ್ಕಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ ಮಳೆ ಹುಡುಗಿ ಪೂಜಾಗಾಂಧಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತುಂಬಿದ್ರು.

ಎರಡು ದಿನಗಳ ಈ ಜಾತ್ರೆಯು ಹಲವು ವೈಶಿಷ್ಟ್ಯ ಒಳಗೊಂಡಿದೆ. 200 ಕಲಾವಿದರಿಂದ ಜಾನದಪ ನೃತ್ಯ ಪ್ರದರ್ಶನ ನಡೆದಿದೆ. ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಪ್ರದರ್ಶನಗಳು ನಡೆದಿದ್ದು, ನಮ್ಮ ಹಳ್ಳಿ ಜೀವನ, ಆಚರಣೆಯನ್ನು ಈ ಜಾತ್ರೆಯಲ್ಲಿ ಕಣ್ತುಂಬಿಕೊಂಡ ಜನರು ಕೂಡ ಖುಷಿ ಪಟ್ಟರು.

ಇಂತಹ ಜಾತ್ರೆ ಪ್ರತಿ ದಿನ ನಡೀಬೇಕೆಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಭಿಪ್ರಾಯ ಪಟ್ಟರು. ಒಟ್ಟಿನಲ್ಲಿ ಎರಡು ದಿನಗಳ ನಮ್ಮ ಜಾತ್ರೆಯಲ್ಲಿ ಮೊದಲನೇ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಸೋಮವಾರ ಕೂಡ ನಮ್ಮ ಜಾತ್ರೆ ಹಬ್ಬ ಇರಲಿದ್ದು, ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.
Published On - 7:46 am, Mon, 11 December 23
























