
ಇಂದು ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಜೊತೆಗೆ ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಶನಿವಾರ ಮಧ್ಯರಾತ್ರಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಎಲ್ಲಾ ಸಿದ್ಧತೆಗಳನ್ನ ಪರಿಶೀಲನೆ ಮಾಡಿದರು.

ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು 3 ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಮಾಹಿತಿ ನೀಡಿದೆ.

ಬಹು ದಿನಗಳ ಬೇಡಿಕೆಯಾದ ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ- ಪೂಣಾ ಹಾಗೂ ಅಮೃತಸರ- ಶ್ರೀ ಮಾತಾ ವೈಷ್ಣೋ ದೇವಿ ಕಟ್ರಾ ಮಧ್ಯೆ ನೂತನ ವಂದೇ ಭಾರತ್ ರೈಲುಗಳು ಸಂಚರಿಸಲಿವೆ ಎಂದು ಅವರು ಹೇಳಿದ್ದಾರೆ.

ಎಲ್ಲರಿಗೂ ಗುಣಮಟ್ಟದ ರೈಲ್ವೆ ಪ್ರಯಾಣವನ್ನು ಕಲ್ಪಿಸಬೇಕು ಎನ್ನುವ ಸಂಕಲ್ಪ ಹೊಂದಲಾಗಿದೆ. ವಂದೇ ಭಾರತ್ ರೈಲುಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆ ಮೂಲಕ ಕಡಿಮೆ ದರ, ಸಮಯದಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಬೆಂಗಳೂರು ದೇಶದಲ್ಲೇ ಒಂದು ಪ್ರಮುಖ ಮಾಹಿತಿ ತಂತ್ರಜ್ಞಾನದ ನಗರವಾಗಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ಮೆಟ್ರೊ ಸೇವೆ ವಿಸ್ತರಿಸುತ್ತಿರುವುದು ಸಂತಸದ ಸಂಗತಿ. ಇದರಿಂದ ಇಲ್ಲಿನ ನಾಗರಿಕರಿಗೆ ಸುಲಲಿತ, ವೇಗವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

ಕರ್ನಾಟಕದಲ್ಲಿ ರೈಲ್ವೆ ಕ್ಷೇತ್ರದ ಅಭ್ಯುದಯಕ್ಕಾಗಿ 7564 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಹಾಸನ-ಬೆಂಗಳೂರು, ಶಿವಾನಿ-ಬೀರೂರು, ಹೊಸದುರ್ಗ-ಚಿಕ್ಕಜಾಜೂರು ಮಾರ್ಗಗಳ ನಡುವಿನ ಡಬ್ಲಿಂಗ್ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ತುಮಕೂರು-ಚಿತ್ರದುರ್ಗ ನಡುವಿನ ನೇರ ರೈಲು ಮಾರ್ಗ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳು ಪ್ರಗತಿಯಲ್ಲಿದ್ದು, ಸಂಪರ್ಕದ ಹೊಸ ಶಕೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.