
‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಫೇಮಸ್ ಆದ ಶಶಿ ಅವರು ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ನಟಿಸಿರುವ ಹೊಸ ಚಿತ್ರದ ಹೆಸರು ‘ಪ್ರೇಮಿಗಳ ಗಮನಕ್ಕೆ’. ಟೈಟಲ್ನಿಂದಲೇ ಈ ಚಿತ್ರ ಕೌತುಕ ಮೂಡಿಸಿದೆ.

‘ಪ್ರೇಮಿಗಳ ಗಮನಕ್ಕೆ’ ಚಿತ್ರದಲ್ಲಿ ಶಶಿ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಚಿರಶ್ರೀ ನಟಿಸಿದ್ದಾರೆ. ಸುಬ್ಬು ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಜುಲೈ ಅಥವಾ ಆಗಸ್ಟ್ ವೇಳೆಗೆ ‘ಪ್ರೇಮಿಗಳ ಗಮನಕ್ಕೆ’ ತೆರೆ ಕಾಣಲಿದೆ.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಯುವಜನತೆಯಲ್ಲಿ ಲಿವಿಂಗ್ ಟುಗೆದರ್ ಟ್ರೆಂಡ್ ಹೆಚ್ಚಿದೆ. ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಕಾಮನ್ ಎಂಬಂತಾಗಿದೆ. ಇಂಥ ಒಂದು ಜೋಡಿಯ ಕಥೆ ಇಟ್ಟುಕೊಂಡು ‘ಪ್ರೇಮಿಗಳ ಗಮನಕ್ಕೆ’ ಚಿತ್ರ ಸಿದ್ಧವಾಗಿದೆ.

ವಿನ್ಸೆಂಟ್ ಇನ್ಬರಾಜ್ ಅವರು ಕಥೆ, ಚಿತ್ರಕಥೆ ಬರೆದು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅರುಳ್ ಸೆಲ್ವನ್ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ‘ಸಿಟಾಡೆಲ್ ಫಿಲಂಸ್’ ಮೂಲಕ ಸುಬ್ಬು ಅವರು ಬಂಡವಾಳ ಹೂಡಿದ್ದಾರೆ.

‘ಪ್ರೇಮಿಗಳ ಗಮನಕ್ಕೆ’ ಚಿತ್ರದ 2 ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆಸಲಾಗಿದೆ. ಉಳಿದ ಹಾಡಿನ ಚಿತ್ರೀಕರಣವನ್ನು ಮಂಗಳೂರಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಿನಿಮಾದ ಫೋಟೋಗಳು ಗಮನ ಸೆಳೆಯುತ್ತಿವೆ.
Published On - 5:25 pm, Mon, 20 March 23