
ಅನುರಾಧಾ ಠಾಕೂರ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ: ಈ ಬಾರಿಯ ಬಜೆಟ್ನ ಮುಖ್ಯ ರೂವಾರಿ ಇವರೇ ಎಂದು ಹೇಳಲಾಗುತ್ತಿದೆ. ಆರ್ಥಿಕ ವ್ಯವಹಾರಗಳ ಇಲಾಖೆಗೆ 2025ರ ಜುಲೈ 1ರಂದು ಕಾರ್ಯದರ್ಶಿಯಾಗಿ ಚುಕ್ಕಾಣಿ ಹಿಡಿದ ಇವರಿಗೆ ಇದು ಮೊದಲ ಬಜೆಟ್ ಅನುಭವ. ಆದರೂ ಕೂಡ ಬಜೆಟ್ ವಿಭಾಗದ ನೇತೃತ್ವದ ಜವಾಬ್ದಾರಿಯನ್ನು ಇವರಿಗೆ ಕೊಡಲಾಗಿದೆ. ಯಾವ್ಯಾವ ಇಲಾಖೆಗೆ ಎಷ್ಟು ಸಂಪನ್ಮೂಲ ನೀಡಬೇಕೆಂದು ನಿರ್ಧರಿಸುವಲ್ಲಿ ಇವರ ಪಾತ್ರ ದೊಡ್ಡದು.

ಅರುಣೀಶ್ ಚಾವ್ಲಾ, ಹೂಡಿಕೆ ಮತ್ತು ಸರ್ಕಾರಿ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ: ಸರ್ಕಾರೀ ಸಂಸ್ಥೆಗಳ ಬಂಡವಾಳ ಹಿಂತೆಗೆತ, ಖಾಸಗೀಕರಣದ ಜವಾಬ್ದಾರಿ ಇವರ ಇಲಾಖೆಯದ್ದು. ಸರ್ಕಾರಿ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆದುಕೊಂಡು ಆ ಮೂಲಕ ತೆರಿಗೆಯೇತರ ಕಂದಾಯದ ಆದಾಯ ನಿರ್ವಹಿಸುವ ಹೊಣೆ ಇವರದ್ದು.

ಅರವಿಂದ್ ಶ್ರೀವಾಸ್ತವ, ರೆವೆನ್ಯೂ ಸೆಕ್ರೆಟರಿ: ಇವರು ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಎರಡರ ಮೇಲ್ವಿಚಾರಣೆ ಮಾಡುತ್ತಾರೆ. ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ಬರುವ ಟ್ಯಾಕ್ಸ್ ಪ್ರೊಪೋಸಲ್ಗಳನ್ನು ತಯಾರಿಸಿದವರು ಇವರೆಯೇ. ರೆವೆನ್ಯೂ ಕಾರ್ಯದರ್ಶಿಯಾಗಿ ಇವರಿಗೆ ಇದು ಮೊದಲ ಬಜೆಟ್.

ಕೆ ಮೋಸಸ್ ಚಲಾಯ್, ಸರ್ಕಾರಿ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿ: ಆಯ್ದ ಸರ್ಕಾರಿ ಉದ್ದಿಮೆಗಳ ಬಂಡವಾಳ ವೆಚ್ಚ ಎಷ್ಟಿರುತ್ತೆ ಎಂಬುದನ್ನು ಇವರು ಗಮನಿಸುತ್ತಾರೆ. ಬಜೆಟ್ನಲ್ಲಿ ನೀಡಲಾಗಿರುವ ಹಣ ಸರಿಯಾಗಿ ವಿನಿಯೋಗ ಆಗುತ್ತಿದೆ ಎಂಬುದನ್ನು ಖಾತ್ರಿಪಡಿಸುತ್ತಾರೆ.

ಎಂ ನಾಗರಾಜು, ಹಣಕಾಸು ಸೇವೆಗಳ ಕಾರ್ಯದರ್ಶಿ: ಹಣಕಾಸು ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತಾ ಸ್ಕೀಮ್ಗಳನ್ನು ಇವರು ನಿಕಟವಾಗಿ ಗಮನಿಸುತ್ತಾರೆ. ಇನ್ಷೂರೆನ್ಸ್ ಕಂಪನಿಗಳು, ಸರ್ಕಾರಿ ಬ್ಯಾಂಕುಗಳು, ಪಿಂಚಣಿ ಸಿಸ್ಟಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯಾ ಎಂಬುದನ್ನು ಗಮನಿಸುತ್ತಾರೆ.

ವಿ ಅನಂತ ನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರ: ಆರ್ಥಿಕ ಸಮೀಕ್ಷೆಯ ರೂವಾರಿ ಇವರೆಯೇ. ಒಟ್ಟಾರೆ ಸ್ಥೂಲ ಆರ್ಥಿಕ ದೃಷ್ಟಿಕೋನವನ್ನು ಇವರು ಬಜೆಟ್ಗೆ ನೀಡುತ್ತಾರೆ. ಆರ್ಥಿಕ ಸ್ಥಿತಿ ಹೇಗಿರುತ್ತದೆ, ಜಾಗತಿಕ ಪರಿಸ್ಥಿತಿ ಹೇಗಿದೆ, ವಿವಿಧ ಸೆಕ್ಟರ್ಗಳ ಆರೋಗ್ಯ ಹೇಗಿದೆ ಎಂಬುದನ್ನು ಇವರು ತಿಳಿಸುತ್ತಾರೆ. ಇವರ ಸಲಹೆ ಆಧಾರದ ಮೇಲೆ ಬಜೆಟ್ ಅಲೋಕೇಶನ್ ಆಗಬಹುದು.

ವುಮ್ಲುನ್ಮಾಂಗ್ ವುವಾಲ್ನಮ್, ಎಕ್ಸ್ಪೆಂಡಿಚರ್ ಸೆಕ್ರೆಟರಿ: ಸರ್ಕಾರ ಮಾಡುವ ವೆಚ್ಚ, ಸಬ್ಸಿಡಿ, ಕೇಂದ್ರ ಸ್ಕೀಮ್ಗಳ ಅನುಷ್ಠಾನ ಇತ್ಯಾದಿಯ ಮೇಲ್ವಿಚಾರಣೆ ಇವರು ಮಾಡುತ್ತಾರೆ. ವಿತ್ತೀಯ ಕೊರತೆ ಮಿತಿಮೀರದಂತೆ ಎಚ್ಚರವಹಿಸುತ್ತಾ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಇವರ ಇಲಾಖೆ ಆದ್ಯತೆ ಕೊಡುತ್ತದೆ. ಹೀಗಾಗಿ, ಬಜೆಟ್ನಲ್ಲಿ ಸರ್ಕಾರದ ವೆಚ್ಚಗಳನ್ನು ಇವರು ಕೂಲಂಕಷವಾಗಿ ಪರಿಶೀಲಿಸಿರುತ್ತಾರೆ.