- Kannada News Photo gallery Chikkamagaluru Government School Students Take First Flight Trip, Muttigepura Kids’ Joy Goes Viral
ಚಿಕ್ಕಮಗಳೂರು: ಮುತ್ತಿಗೆಪುರ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಭಾಗ್ಯ! ಫ್ಲೈಟ್‌ನಲ್ಲಿ ಚಿಣ್ಣರ ಸಂಭ್ರಮ ನೋಡಿ
ಚಿಕ್ಕಮಗಳೂರು, ಜನವರಿ 8: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರದ ಸರ್ಕಾರಿ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳೂ ಹುಬ್ಬೇರಿಸುವಂಥ ಅಪೂರ್ವ ಕೆಲಸವೊಂದನ್ನು ಮಾಡಿ ಗಮನ ಸೆಳೆದಿದೆ. 5, 6 ಮತ್ತು 7ನೇ ತರಗತಿಯ 32 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣದ ಅನುಭವ ನೀಡುವ ಮೂಲಕ, ಸರ್ಕಾರಿ ಶಾಲೆಯೊಂದು ಮಕ್ಕಳನ್ನು ಫ್ಲೈಟ್ ಟೂರ್ ಕರೆದುಕೊಂಡು ಹೋಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
Updated on:Jan 08, 2026 | 12:36 PM

ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸ ಕೈಗೊಂಡ ಈ ಮಕ್ಕಳು, ಫ್ಲೈಟ್‌ನಲ್ಲಿ ಪ್ರಯಾಣಿಸುವ ಮೂಲಕ ಜೀವನದಲ್ಲಿ ಮರೆಯಲಾಗದ ಅನುಭವ ಪಡೆದುಕೊಂಡಿದ್ದಾರೆ. ವಿಮಾನದಲ್ಲಿ ಕುಳಿತು ಹಾರಾಟದ ಸಂಭ್ರಮ ಅನುಭವಿಸಿದ ಪುಟ್ಟ ಮಕ್ಕಳ ಮುಖದಲ್ಲಿ ಕಂಡ ಖುಷಿ ನೋಡುವುದೇ ಒಂದು ಹಬ್ಬದಂತಿತ್ತು. ಬೆಂಗಳೂರಿಗೆ ಫ್ಲೈಟ್ ಮೂಲಕ ತೆರಳಿ, ಅಲ್ಲಿಂದ ಬಸ್‌ನಲ್ಲಿ ಹಿಂತಿರುಗುವಂತೆ ಪ್ರವಾಸವನ್ನು ಯೋಜಿಸಲಾಗಿತ್ತು.

ಈ ವಿಶಿಷ್ಟ ಪ್ರವಾಸ ಶಿಕ್ಷಕರು, ಪೋಷಕರು, ದಾನಿಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅವರ ಸಹಕಾರದಿಂದ ಸಾಧ್ಯವಾಗಿದೆ. ಮಕ್ಕಳಿಗೆ ಪುಸ್ತಕದ ಪಾಠಕ್ಕಷ್ಟೇ ಸೀಮಿತವಲ್ಲದೆ, ಜೀವನ ಪಾಠವನ್ನೂ ಕಲಿಸಬೇಕು ಎಂಬ ಉದ್ದೇಶದಿಂದ ಈ ಪ್ರವಾಸವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳು ಎಂದರೆ ಹಿಂದುಳಿದವೆಂಬ ಧೋರಣೆಗೆ ತುತ್ತು ಬೀಳುವವರಿಗೂ ಈ ಶಾಲೆ ಒಂದು ಮಾದರಿಯಾಗಿದೆ. ‘ಸರ್ಕಾರಿ ಶಾಲೆ ಅಂದ್ರೆ ಸುಮ್ನೇನಾ?’ ಎಂಬ ಪ್ರಶ್ನೆಗೆ ಮುತ್ತಿಗೆಪುರದ ಈ ಶಾಲೆ ತನ್ನ ಕಾರ್ಯದ ಮೂಲಕಲೇ ಗಟ್ಟಿಯಾದ ಉತ್ತರ ಕೊಟ್ಟಿದೆ.

ಈ ಹಿಂದೆ, ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ಜಿಂದಾಲ್ ಏರ್ಪೋರ್ಟ್ನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದು ಸುದ್ದಿಯಾಗಿದ್ದರು. ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಬಿಸಿಯೂಟ ಅಡುಗೆ ತಯಾರಕರು ಸೇರಿ ಒಟ್ಟು 40 ಜನರು ವಿಮಾನ ಪ್ರಯಾಣ ಮಾಡಿದ್ದರು.

ಒಟ್ಟಿನಲ್ಲಿ, ಖಾಸಗಿ ಶಾಲೆಯವರಿಗೂ ಅಚ್ಚರಿ ಮೂಡಿಸಿದ ಮುತ್ತಿಗೆಪುರದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ವಿಮಾನ ಪ್ರವಾಸ, ಸರ್ಕಾರಿ ಶಾಲೆಗಳ ಸಾಮರ್ಥ್ಯಕ್ಕೆ ಹೊಸ ಅರ್ಥ ನೀಡಿದೆ. ಕಾಫಿನಾಡಿನ ಕುಗ್ರಾಮದಿಂದ ಹಾರಿದ ಈ ಪುಟ್ಟ ಕನಸುಗಳು, ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಹಾರಲಿ ಎಂಬುದೇ ಎಲ್ಲರ ಆಶಯ.
Published On - 12:35 pm, Thu, 8 January 26
