1343 ದಿನಗಳಿಂದ ಟೆಸ್ಟ್ ಪಂದ್ಯ ಗೆಲ್ಲದ ಪಾಕಿಸ್ತಾನ್..!
England vs Pakistan: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡ ಹೀನಾಯವಾಗಿ ಸೋತಿದೆ. ಇದೀಗ ಉಭಯ ತಂಡಗಳು ಅಕ್ಟೋಬರ್ 15 ರಿಂದ ಶುರುವಾಗಲಿರುವ ಎರಡನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು.
1 / 5
ಬರೋಬ್ಬರಿ 3 ವರ್ಷ, 8 ತಿಂಗಳು, 9 ದಿನಗಳು... ಪಾಕಿಸ್ತಾನ್ ತಂಡ ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ಮೂರುವರೆ ವರ್ಷಗಳೇ ಕಳೆದಿವೆ. 2021 ರಲ್ಲಿ ಕೊನೆಯ ಬಾರಿಗೆ ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದ ಪಾಕ್ ತಂಡವು ಕಳೆದ ಮೂರು ವರ್ಷಗಳಿಂದ ಗೆಲುವಿಗಾಗಿ ಪರದಾಡುತ್ತಿದೆ.
2 / 5
ಈ ಪರದಾಟವು ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಮುಂದುವರೆದಿದೆ. ಮುಲ್ತಾನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ತಂಡವು 556 ರನ್ ಕಲೆಹಾಕಿತು. ಇದಕ್ಕುತ್ತರವಾಗಿ 823/7 ರನ್ ಪೇರಿಸಿ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿತು. 267 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕ್ ತಂಡವು ಕೇವಲ 220 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ.
3 / 5
ಕಳೆದ 3 ವರ್ಷಗಳಲ್ಲಿ ಪಾಕಿಸ್ತಾನ್ ತಂಡವು ತವರಿನಲ್ಲಿ ಒಟ್ಟು 11 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 4 ಮ್ಯಾಚ್ಗಳಲ್ಲಿ ಡ್ರಾ ಸಾಧಿಸಿದ್ದು ಶ್ರೇಷ್ಠ ಸಾಧನೆ. ಇನ್ನುಳಿದ 7 ಪಂದ್ಯಗಳಲ್ಲೂ ಸೋಲನುಭವಿಸಿದೆ. ಅಂದರೆ ಪಾಕಿಸ್ತಾನ್ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ಬರೋಬ್ಬರಿ 1,343 ದಿನಗಳೇ ಕಳೆದಿವೆ.
4 / 5
ಇಂತಹದೊಂದು ಸೋಲಿನ ಸರಪಳಿಗೆ ಸಿಲುಕಿದ್ದ ಪಾಕಿಸ್ತಾನ್ ತಂಡದ ನಾಯಕತ್ವದಿಂದ ಬಾಬರ್ ಆಝಂ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ಶಾನ್ ಮಸೂದ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಾಕ್ ಪಡೆಯು ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದ್ದು, ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
5 / 5
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಸತತ ಸೋಲುಗಳನ್ನು ಕಂಡ ಅತ್ಯಂತ ಕೆಟ್ಟ ದಾಖಲೆ ಝಿಂಬಾಬ್ವೆ ತಂಡದ ಹೆಸರಿನಲ್ಲಿದೆ. ಝಿಂಬಾಬ್ವೆ ತಂಡವು ತವರಿನಲ್ಲಿ ಗೆದ್ದು 4030 ದಿನಗಳೇ ಕಳೆದಿವೆ. ಇದೀಗ 1,343 ದಿನಗಳ ನಡುವೆ ತವರಿನಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ತಂಡವು ಗೆಲುವಿಗಾಗಿ ಪರಿತಪಿಸುತ್ತಿದೆ. ಈ ಪರಿತಪಿಸುವಿಕೆ ಹೀಗೆ ಮುಂದುವರೆದರೆ ತವರಿನಲ್ಲಿ ಟೆಸ್ಟ್ ಪಂದ್ಯ ಗೆಲ್ಲಲಾಗದ ಸುದೀರ್ಘವಧಿಯ ಕೆಟ್ಟ ದಾಖಲೆಯೊಂದು ಪಾಕ್ ಪಾಲಾಗಲಿದೆ.