
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಇದೀಗ ಆರ್ಸಿಬಿ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಕಳೆದ ಸೀಸನ್ ಐಪಿಎಲ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ಸಲ ಹೊಸ ನಾಯಕನ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಆರ್ಸಿಬಿ ಫ್ರಾಂಚೈಸಿಗೆ ಬಂದೊದಗಿದೆ.

ಆದರೆ ಇದೀಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಅವರು ಮತ್ತೆ ಆರ್ಸಿಬಿ ನಾಯಕರಾಗಲಿದ್ದಾರಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಇದಾಗ್ಯೂ ಆರ್ಸಿಬಿ ಹಿಟ್ ಲೀಸ್ಟ್ನಲ್ಲಿ ಕೆಲ ಆಟಗಾರರ ಹೆಸರಿದೆ. ಒಂದು ವೇಳೆ ಆರ್ಸಿಬಿ ತಂಡವು ಇವರಲ್ಲಿ ಒಬ್ಬರನ್ನು ಖರೀದಿಸಿದರೂ ಇವರಿಗೆ ನಾಯಕತ್ವ ನೀಡಬಹುದು.

ಗ್ಲೆನ್ ಮ್ಯಾಕ್ಸ್ವೆಲ್: ಈ ಬಾರಿ ಆರ್ಸಿಬಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಅತ್ತ ಬಿಬಿಎಲ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮುನ್ನಡೆಸಿರುವ ಮ್ಯಾಕ್ಸಿ ಭರ್ಜರಿ ಪ್ರದರ್ಶನ ನೀಡಿದ್ದರು. ಹೀಗಾಗಿ ಮ್ಯಾಕ್ಸ್ವೆಲ್ ಅವರಿಗೆ ತಂಡದ ಸಾರಥ್ಯ ನೀಡಿದರೂ ಅಚ್ಚರಿಪಡಬೇಕಿಲ್ಲ.

ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಈ ಹಿಂದೆ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರುವ ಅಯ್ಯರ್ ನಾಯಕತ್ವವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಆರ್ಸಿಬಿ ತಂಡವು ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿ ನಾಯಕತ್ವ ನೀಡಬಹುದು.

ಡೇವಿಡ್ ವಾರ್ನರ್: ಆರ್ಸಿಬಿ ತಂಡದಿಂದ ಎಬಿ ಡಿವಿಲಿಯರ್ಸ್ ಹೊರನಡೆದಿದ್ದಾರೆ. ಇದೀಗ ಆರ್ಸಿಬಿಗೆ ವಿದೇಶಿ ಸ್ಟಾರ್ ಆಟಗಾರರೊಬ್ಬರ ಅವಶ್ಯಕತೆಯಿದೆ. ಅತ್ತ ಮೆಗಾ ಹರಾಜಿನಲ್ಲಿ ಎಸ್ಆರ್ಹೆಚ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಇದ್ದಾರೆ. ವಾರ್ನರ್ ನಾಯಕತ್ವದಲ್ಲಿ 2016 ರಲ್ಲಿ ಎಸ್ಆರ್ಹೆಚ್ ಚಾಂಪಿಯನ್ ಪಟ್ಟಕ್ಕೇರಿತು. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ವಾರ್ನರ್ ಅವರ ಖರೀದಿಯಿಂದ ಆರ್ಸಿಬಿ ಆರಂಭಿಕನ ಹಾಗೂ ನಾಯಕನ ಸಮಸ್ಯೆಯನ್ನು ನೀಗಿಸಬಹುದು. ಹೀಗಾಗಿ ಡೇವಿಡ್ ವಾರ್ನರ್ ಖರೀದಿಗೆ ಆರ್ಸಿಬಿ ಹೆಚ್ಚಿನ ಆಸಕ್ತಿ ತೋರಲಿದೆ.

ಮನೀಷ್ ಪಾಂಡೆ: ಆರ್ಸಿಬಿ ತಂಡದ ಮಾಜಿ ಆಟಗಾರ ಮನೀಷ್ ಪಾಂಡೆ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ಸೀಸನ್ಗಳಿಂದ ಎಸ್ಆರ್ಹೆಚ್ ತಂಡದಲ್ಲಿದ್ದ ಪಾಂಡೆ ಕೆಲವು ಪಂದ್ಯಗಳಲ್ಲಿ ನಾಯಕರಾಗಿಯೂ ಕೂಡ ಕಣಕ್ಕಿಳಿದಿದ್ದರು. ಅದರಲ್ಲೂ ಕರ್ನಾಟಕ ತಂಡದ ನಾಯಕನಾಗಿ ಮನೀಷ್ ಪಾಂಡೆ ಅತ್ಯುತ್ತಮ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ಸ್ಥಳೀಯ ಕ್ರಿಕೆಟಿಗನಿಗೆ ಆರ್ಸಿಬಿ ಮಣೆಹಾಕುವುದಾದರೆ ಮನೀಷ್ ಪಾಂಡೆಗೆ ನಾಯಕತ್ವ ಸಿಗುವುದು ಬಹುತೇಕ ಖಚಿತ ಎನ್ನಬಹುದು.