Updated on:Jan 30, 2022 | 4:11 PM
Under 19 World Cup 2022: ಭಾರತವು 10ನೇ ಬಾರಿಗೆ ಅಂಡರ್-19 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿ ನಿರ್ಣಾಯಕ ಹಂತ ತಲುಪಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 111 ರನ್‌ಗಳಿಗೆ ಆಲೌಟ್ ಆಗಿತ್ತು. ಬಾಂಗ್ಲಾ ತಂಡವು ಕಡಿಮೆ ಮೊತ್ತಕ್ಕೆ ಆಲೌಟ್ ಆಗುವಲ್ಲಿ ಎಡಗೈ ವೇಗಿ ರವಿಕುಮಾರ್ ಪಾತ್ರ ಪ್ರಮುಖವಹಿಸಿದ್ದರು.
19 ವರ್ಷದೊಳಗಿನವರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಭಾರತ ಸೆಮಿಫೈನಲ್ ತಲುಪಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಅಂಡರ್ 19 ವಿಶ್ವಕಪ್ನಲ್ಲಿನ 2 ವರ್ಷಗಳ ಹಿಂದಿನ ಬಾಂಗ್ಲಾದೇಶದ ವಿರುದ್ದ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಈ ಭರ್ಜರಿ ಗೆಲುವಿನ ಹೀರೋ ಎಡಗೈ ಸ್ವಿಂಗ್ ಬೌಲರ್ ರವಿಕುಮಾರ್. ಬಾಂಗ್ಲಾದೇಶವನ್ನು 111 ರನ್‌ಗಳಿಗೆ ಕಟ್ಟಿಹಾಕುವಲ್ಲಿ ರವಿ ಪ್ರಮುಖ ಪಾತ್ರ ವಹಿಸಿದ್ದರು. 7 ಓವರ್ ಬೌಲಿಂಗ್ ಮಾಡಿದ್ದ ರವಿ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಈ ಭರ್ಜರಿ ಬೌಲಿಂಗ್ ಪ್ರದರ್ಶನಕ್ಕಾಗಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಅಂದಹಾಗೆ ರವಿ ಕುಮಾರ್ ಯೋಧರ ಮಗ ಎಂಬುದು ವಿಶೇಷ. ಅವರ ತಂದೆ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರವಿ 29 ಅಕ್ಟೋಬರ್ 2003 ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು. ಇದಾದ ಬಳಿಕ ಅವರ ಕುಟುಂಬ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಅಲ್ಲಿಂದ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು. ಆ ಬಳಿಕ ಕೋಚ್ ರವಿ ಭಾರದ್ವಾಜ್ ಅವರಿಗೆ ಕ್ರಿಕೆಟ್ನ ಪ್ರಾರಂಭಿಕ ಪಾಠಗಳನ್ನು ಕಲಿಸಿದ್ದರು. ಇದಾದ ಬಳಿಕ ಈ ಎಡಗೈ ಬೌಲರ್ ಕೋಲ್ಕತ್ತಾಗೆ ಅದೃಷ್ಟ ಪರೀಕ್ಷೆಗೆ ಮರಳಿದ್ದರು.
ರವಿಕುಮಾರ್ 2019 ರಲ್ಲಿ ಅಂಡರ್ 16 ಟ್ರಯಲ್ಸ್ ನೀಡಲು ಬ್ಯಾಲಿಗಂಜ್ ಯುನೈಟೆಡ್ ಕ್ರಿಕೆಟ್ ಕ್ಲಬ್‌ಗೆ ಬಂದಿದ್ದರು. ಆಗ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧಿಕಾರಿಗಳು ಅವರಿಗೆ ಅವಕಾಶ ನೀಡಲಿಲ್ಲ. ಏಕೆಂದರೆ ಅವರು ವಯಸ್ಸಿನ ದಾಖಲಾತಿಗಳನ್ನು ನೀಡಲು ವಿಫಲರಾಗಿದ್ದರು. ಆದಾಗ್ಯೂ, ಇದರ ನಂತರ, ಅವರು ಕಾಂಚನ್‌ಜಂಗ್ ವಾರಿಯರ್ಸ್ ಪರವಾಗಿ CAB T20 ಲೀಗ್‌ನಲ್ಲಿ ಭಾಗವಹಿಸಿದರು. ಅಲ್ಲದೆ ಆ ಬಳಿಕ ಬಂಗಾಳದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದರು.
ಕಳೆದ ಕೆಲವು ವರ್ಷಗಳಿಂದ ರವಿಕುಮಾರ್ ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ಬಂಗಾಳದ ಅಂಡರ್-19 ತಂಡದ ಕೋಚ್ ದೇವಾಂಗ್ ಗಾಂಧಿ ಅವರ ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದು ಅವರ ಆಟದಲ್ಲಿ ಸಾಕಷ್ಟು ಸುಧಾರಣೆ ತಂದಿದೆ. ರವಿಯ ಬಹುದೊಡ್ಡ ಸ್ಪೆಷಾಲಿಟಿ ಎಂದರೆ ಚೆಂಡನ್ನು ಇನ್ ಮತ್ತು ಔಟ್ ಸ್ವಿಂಗ್ ಮಾಡುವುದು. ಎತ್ತರದ ಕಾರಣದಿಂದಾಗಿ, ಅವರ ಎಸೆತಗಳು ಹೆಚ್ಚುವರಿ ಬೌನ್ಸ್ ಪಡೆಯುತ್ತವೆ. ಹಾಗೆಯೇ ಹೊಸ ಚೆಂಡಿನೊಂದಿಗೆ ವಿಕೆಟ್ ಪಡೆಯುವಲ್ಲಿ ಪರಿಣತರಾಗಿದ್ದಾರೆ.
ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ನಲ್ಲಿ ರವಿ ಇದುವರೆಗೆ ಉತ್ತಮ ಬೌಲಿಂಗ್ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೊದಲು ಅವರು ಐರ್ಲೆಂಡ್ ವಿರುದ್ಧ 11ಕ್ಕೆ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ್ದರು. ಆ ಪಂದ್ಯದಲ್ಲಿ 34 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದರು. ವಿಶೇಷ ಎಂದರೆ ಇದುವರೆಗೆ ಟೂರ್ನಿಯಲ್ಲಿ ಅವರು ತಮ್ಮ ಕೋಟಾದ 10 ಓವರ್‌ಗಳನ್ನು ಸಹ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಏಕೆಂದರೆ ಎದುರಾಳಿ ತಂಡಕ್ಕೆ ಭಾರತದ ವಿರುದ್ಧ ಸಂಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಸದ್ಯ ರವಿ ಅಂಡರ್ 19 ಏಷ್ಯಾಕಪ್ನಲ್ಲಿ 4 ವಿಕೆಟ್ ಪಡೆದಿದ್ದಾರೆ.
ಜಹೀರ್ ಖಾನ್, ಇರ್ಫಾನ್ ಪಠಾಣ್ ಮತ್ತು ಆಶಿಶ್ ನೆಹ್ರಾ ನಿವೃತ್ತಿಯಾದ ನಂತರ ಭಾರತ ತಂಡದ ಎಡಗೈ ವೇಗದ ಬೌಲರ್‌ನ ಹುಡುಕಾಟದಲ್ಲಿದೆ. 2016 ರ ಅಂಡರ್-19 ವಿಶ್ವಕಪ್‌ನಿಂದ ಹೊರಬಂದ ಖಲೀಲ್ ಅಹ್ಮದ್ ಸ್ವಲ್ಪ ಭರವಸೆ ಮೂಡಿಸಿದ್ದರು. ಆದರೆ ಕೆಲವು ಪಂದ್ಯಗಳ ನಂತರ ತಂಡದಿಂದ ಹೊರನಡೆದರು. ಟಿ ನಟರಾಜನ್ ಕೂಡ ಉತ್ತಮ ಆರಂಭ ಪಡೆದಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ನಿರಂತರವಾಗಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಹೀಗಿರುವಾಗ ರವಿಕುಮಾರ್ ಮೇಲೆ ಭಾರೀ ನಿರೀಕ್ಷೆ ಮೂಡಿದ್ದು, ಟೀಮ್ ಇಂಡಿಯಾದ ಎಡಗೈ ವೇಗದ ಬೌಲರ್ ಆಗಿ ಮುಂದೆ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
Published On - 4:10 pm, Sun, 30 January 22