ICC Rankings: ಆಸ್ಟ್ರೇಲಿಯನ್ನರ ಪ್ರಾಬಲ್ಯ.. ಅಗ್ರ ಹತ್ತರಲ್ಲಿ ಐವರು ಬೌಲರ್ಗಳು
ICC Test Bowling Rankings: ಐಸಿಸಿ ಟೆಸ್ಟ್ ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಐವರು ಬೌಲರ್ಗಳು ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾದ ಏಕೈಕ ವೇಗಿ ಮಾತ್ರ. ಅಲ್ಲದೆ ಅಗ್ರ ಇಪ್ಪತ್ತರಲ್ಲೂ ಸ್ಥಾನ ಪಡೆಯುವಲ್ಲಿ ಭಾರತದ ಇತರೆ ವೇಗದ ಬೌಲರ್ಗಳಿಗೆ ಸಾಧ್ಯವಾಗಿಲ್ಲ.
Updated on: Jul 17, 2025 | 10:35 AM

ಐಸಿಸಿ ಟೆಸ್ಟ್ ಬೌಲರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಅಲಂಕರಿಸಿದರೆ, ಸೌತ್ ಆಫ್ರಿಕಾದ ಕಗಿಸೊ ರಬಾಡ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಟಾಪ್-10 ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಐವರು ಬೌಲರ್ಗಳು ಕಾಣಿಸಿಕೊಂಡಿರುವುದು ವಿಶೇಷ. ಆ ಬೌಲರ್ಗಳೆಂದರೆ...

ಪ್ಯಾಟ್ ಕಮಿನ್ಸ್: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟೆಸ್ಟ್ ಬೌಲರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಒಟ್ಟು 838 ಅಂಕಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಮೂರನೇ ರ‍್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜೋಶ್ ಹೇಝಲ್ವುಡ್: ಆಸ್ಟ್ರೇಲಿಯಾ ತಂಡದ ಬೌಲಿಂಗ್ ಬಲವಾಗಿ ಗುರುತಿಸಿಕೊಂಡಿರುವ ಜೋಶ್ ಹೇಝಲ್ವುಡ್ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ದಾಳಿ ಸಂಘಟಿಸಿದ್ದರು. ಈ ಮೂಲಕ 815 ಅಂಕಗಳೊಂದಿಗೆ ಟೆಸ್ಟ್ ಬೌಲರ್ಗಳ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

ಸ್ಕಾಟ್ ಬೋಲ್ಯಾಂಡ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದ ಸ್ಕಾಟ್ ಬೋಲ್ಯಾಂಡ್ 6 ಸ್ಥಾನ ಮೇಲೇರಿದ್ದು, ಈ ಮೂಲಕ ನೂತನ ಶ್ರೇಯಾಂಕ ಪಟ್ಟಿಯಲ್ಲಿ 784 ಅಂಕಗಳೊಂದಿಗೆ ಆರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಾಥನ್ ಲಿಯಾನ್: ಆಸ್ಟ್ರೇಲಿಯಾ ತಂಡದ ಸ್ಪಿನ್ ಮಾಂತ್ರಿಕ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಛಾಪು ಮುಂದುವರೆಸಿದ್ದು, ಈ ಮೂಲಕ 769 ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ 769 ರೇಟಿಂಗ್ನೊಂದಿಗೆ ನಾಥನ್ ಲಿಯಾನ್ ಪ್ರಸ್ತುತ ಟೆಸ್ಟ್ ಬೌಲರ್ಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಮಿಚೆಲ್ ಸ್ಟಾರ್ಕ್: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 15 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿ ಹೊಸ ಇತಿಹಾಸ ಬರೆದಿರುವ ಮಿಚೆಲ್ ಸ್ಟಾರ್ಕ್ ಟೆಸ್ಟ್ ಬೌಲರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಒಟ್ಟು 766 ಅಂಕಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಹತ್ತನೇ ಸ್ಥಾನ ಪಡೆಯುವಲ್ಲಿ ಅನುಭವಿ ಎಡಗೈ ವೇಗಿ ಯಶಸ್ವಿಯಾಗಿದ್ದಾರೆ.




