ICC Rankings: ಐಸಿಸಿ ರ್ಯಾಂಕಿಂಗ್ನಲ್ಲಿ ಭಾರತದ ಐವರು ನಂಬರ್ 1
ICC Rankings 2025: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಐವರು ಆಟಗಾರರು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಏಕದಿನ ಹಾಗೂ ಟಿ20 ಕ್ರಿಕೆಟ್ ಬ್ಯಾಟರ್ಗಳ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಇಬ್ಬರು ಯುವ ದಾಂಡಿಗರು ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡರೆ, ಟೆಸ್ಟ್ ಹಾಗೂ ಟಿ20 ಆಲ್ರೌಂಡರ್ಗಳ ಪಟ್ಟಿಯಲ್ಲಿ ಅನುಭವಿಗಳಿಬ್ಬರು ಅಗ್ರಸ್ಥಾನ ಅಲಂಕರಿಸಿದ್ದಾರೆ.
Updated on: Jul 31, 2025 | 12:54 PM

ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಂಡಗಳ ಪಟ್ಟಿಯಲ್ಲೂ ಭಾರತ ಮೊದಲ ಸ್ಥಾನವನ್ನು ಅಲಂಕರಿಸಿದೆ. ನೂತನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಅಭಿಷೇಕ್ ಶರ್ಮಾ: ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಯುವ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ ಮೊದಲ ಸ್ಥಾನಕ್ಕೇರಿದ್ದಾರೆ. ಕಳೆದ ಬಾರಿ ಅಗ್ರಸ್ಥಾನದಲ್ಲಿದ್ದ ಟ್ರಾವಿಡ್ ಹೆಡ್ ಅವರನ್ನು ಹಿಂದಿಕ್ಕಿ ಅಭಿಷೇಕ್ ಶರ್ಮಾ 829 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶುಭ್ಮನ್ ಗಿಲ್: ಏಕದಿನ ಕ್ರಿಕೆಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಶುಭ್ಮನ್ ಗಿಲ್ ಅಗ್ರಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಅವರನ್ನು ಹಿಂದಿಕ್ಕಿರುವ ಗಿಲ್ 784 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ: ಟಿ20 ಆಲ್ರೌಂಡರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಹಾರ್ದಿಕ್ ಪಾಂಡ್ಯ. 252 ಅಂಕಗಳನ್ನು ಹೊಂದಿರುವ ಹಾರ್ದಿಕ್ ಕಳೆದ ಕೆಲ ವಾರಗಳಿಂದ ನಂಬರ್ 1 ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರವೀಂದ್ರ ಜಡೇಜಾ: ಭಾರತ ಟೆಸ್ಟ್ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಒಟ್ಟು 422 ಅಂಕಗಳನ್ನು ಹೊಂದಿರುವ ಜಡೇಜಾ ಕಳೆದ ಒಂದು ತಿಂಗಳಿಂದ ಮೊದಲ ಸ್ಥಾನದಿಂದ ಕೆಳಗಿಳಿದಿಲ್ಲ ಎಂಬುದು ವಿಶೇಷ.

ಜಸ್ಪ್ರೀತ್ ಬುಮ್ರಾ: ಟೆಸ್ಟ್ ಬೌಲರ್ಗಳ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ. 898 ಅಂಕಗಳನ್ನು ಹೊಂದಿರುವ ಬುಮ್ರಾ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಐಸಿಸಿ ತಂಡಗಳ ಶ್ರೇಯಾಂಕ ಪಟ್ಟಿಯಲ್ಲೂ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಏಕದಿನ ಹಾಗೂ ಟಿ20 ತಂಡಗಳ ರ್ಯಾಂಕಿಂಗ್ನಲ್ಲಿ ಭಾರತ ತಂಡವು ಮೊದಲ ಸ್ಥಾನದಲ್ಲಿದ್ದು, ಇನ್ನು ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.




