
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ಟಿ20 ಕ್ರಿಕೆಟ್ನ ಸಿಡಿಲಮರಿ ಎಬಿ ಡಿವಿಲಿಯರ್ಸ್ ಆಲ್ ಟೈಮ್ ಐಪಿಎಲ್ ಇಲೆವೆನ್ ಪ್ರಕಟಿಸಿದ್ದಾರೆ. ಎಬಿಡಿ ಪ್ರಕಟಿಸಿರುವ ಐಪಿಎಲ್ನ ಸಾರ್ವಕಾಲಿಕ ಇಲೆವೆನ್ನಲ್ಲಿ ಭಾರತದ 7 ಆಟಗಾರರು ಕಾಣಿಸಿಕೊಂಡರೆ, ನಾಲ್ವರು ವಿದೇಶಿ ಆಟಗಾರರಿದ್ದಾರೆ.

ಎಬಿ ಡಿವಿಲಿಯರ್ಸ್ ಹೆಸರಿಸಿದ ಆಲ್ ಟೈಮ್ ಪ್ಲೇಯಿಂಗ್ ಇಲೆವೆನ್ನಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿರುವುದು ರೋಹಿತ್ ಶರ್ಮಾ ಹಾಗೂ ಮ್ಯಾಥ್ಯೂ ಹೇಡನ್. ಹಿಟ್ಮ್ಯಾನ್ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ. ಹಾಗೆಯೇ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಈ ಹಿಂದೆ ಸಿಎಸ್ಕೆ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಐಪಿಎಲ್ನ ರನ್ ಸರದಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಹೆಸರಿಸಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ ಅವರನ್ನು ಎಬಿಡಿ ಆಯ್ಕೆ ಮಾಡಿದ್ದಾರೆ.

ಐದನೇ ಕ್ರಮಾಂಕಕ್ಕೆ ಎಬಿಡಿ ಖುದ್ದು ತನ್ನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಆಲ್ರೌಂಡರ್ ಆಗಿ ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿಕೊಂಡಿರುವುದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು. ಪಾಂಡ್ಯ ಅವರನ್ನು 6ನೇ ಕ್ರಮಾಂಕಕ್ಕೆ ಹೆಸರಿಸಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಿಎಸ್ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೆಯೇ ಆರ್ಸಿಬಿ ತಂಡದ ಮಾಜಿ ಆಟಗಾರ, ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ಯುಜ್ವೇಂದ್ರ ಚಹಲ್ ಅವರನ್ನು ಸ್ಪಿನ್ನರ್ ಆಗಿ ಎಬಿಡಿ ತನ್ನ ಆಲ್ ಟೈಮ್ ಇಲೆವೆನ್ನಲ್ಲಿ ಹೆಸರಿಸಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿರುವುದು ಮುಂಬೈ ಇಂಡಿಯನ್ಸ್ ಮಾಜಿ ವೇಗಿ ಲಸಿತ್ ಮಾಲಿಂಗ ಹಾಗೂ ಆರ್ಸಿಬಿ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ. ಇವರೊಂದಿಗೆ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಎಬಿ ಡಿವಿಲಿಯರ್ಸ್ ತನ್ನ ಆಲ್ ಟೈಮ್ ಇಲೆವೆನ್ಗೆ ಆಯ್ಕೆ ಮಾಡಿದ್ದಾರೆ.

ಎಬಿ ಡಿವಿಲಿಯರ್ಸ್ ಆಲ್ ಟೈಮ್ ಐಪಿಎಲ್ ಇಲೆವೆನ್: ರೋಹಿತ್ ಶರ್ಮಾ, ಮ್ಯಾಥ್ಯೂ ಹೇಡನ್, ಸೂರ್ಯಕುಮಾರ್ ಯಾದವ್, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಮಹೇಂದ್ರ ಸಿಂಗ್ ಧೋನಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್, ಲಸಿತ್ ಮಾಲಿಂಗ, ಡೇನಿಯಲ್ ವೆಟ್ಟೋರಿ.