ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದ ಅಭಿಷೇಕ್ ಶರ್ಮಾ (Abhishek Sharma) ತಮ್ಮ ಭರ್ಜರಿ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಗುರ್ಗಾಂವ್ನಲ್ಲಿ ನಡೆದ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿದ ಅಭಿಷೇಕ್ ಕೇವಲ 26 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಮಾರಿಯೋ ಕ್ರಿಕೆಟ್ ಕ್ಲಬ್ ಮತ್ತು ಪಂಟರ್ಸ್ ಇಲೆವೆನ್ ತಂಡಗಳು ಮುಖಾಮುಖಿಯಾಗಿದ್ದವು. ಅದರಂತೆ ಮೊದಲು ಬ್ಯಾಟ್ ಮಾಡಿದ ಮಾರಿಯೋ ಕ್ರಿಕೆಟ್ ಕ್ಲಬ್ ಆರಂಭಿಕ ಬ್ಯಾಟರ್ ಕೃನಾಲ್ ಸಿಂಗ್ 21 ಎಸೆತಗಳಲ್ಲಿ 60 ರನ್ ಬಾರಿಸಿದರೆ, ನದೀಮ್ ಖಾನ್ 32 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರು. ಈ ಮೂಲಕ ಮಾರಿಯೋ ಕ್ಲಬ್ 20 ಓವರ್‌ಗಳಲ್ಲಿ 249 ರನ್ ಕಲೆಹಾಕಿತು.
250 ರನ್‌ಗಳ ಕಠಿಣ ಗುರಿ ಪಡೆದ ಪಂಟರ್ಸ್ ಇಲೆವೆನ್ ಪರ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್ನಿಂದಲೇ ಸಿಕ್ಸ್ಗಳ ಸುರಿಮಳೆಗೈದ ಅಭಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ ಮಾರಿಯೋ ಕ್ಲಬ್ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಕೇವಲ 25 ಎಸೆತಗಳಲ್ಲಿ ಅಭಿಷೇಕ್ ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂತು. ಈ ಭರ್ಜರಿ ಶತಕದ ಇನಿಂಗ್ಸ್ನಲ್ಲಿ ಬರೋಬ್ಬರಿ 14 ಸಿಕ್ಸ್ಗಳನ್ನು ಸಿಡಿಸಿದ್ದರು. ಹಾಗೆಯೇ 4 ಫೋರ್ಗಳು ಮೂಡಿಬಂದಿದ್ದವು. ಅಂದರೆ ಬೌಂಡರಿಗಳಿಂದಲೇ ಅಭಿಷೇಕ್ ಶರ್ಮಾ 100 ರನ್ ಕಲೆಹಾಕಿದ್ದರು.
ಕೇವಲ 26 ಎಸೆತಗಳಲ್ಲಿ 103 ರನ್ ಬಾರಿಸಿದ ಅಭಿಷೇಕ್ ಶರ್ಮಾ ಅವರ ವಿಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪಂಟರ್ಸ್ ಇಲೆವೆನ್ ತಂಡವು 18.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 250 ರನ್‌ಗಳ ಗುರಿ ಮುಟ್ಟಿತು. ಈ ಮೂಲಕ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಅಂದಹಾಗೆ ಈ ಬಾರಿಯ ಐಪಿಎಲ್ನಲ್ಲಿ ಅಭಿಷೇಕ್ ಶರ್ಮಾ 16 ಪಂದ್ಯಗಳಿಂದ 484 ರನ್ ಕಲೆಹಾಕಿದ್ದರು. ಈ ವೇಳೆ 42 ಸಿಕ್ಸ್ಗಳನ್ನು ಸಿಡಿಸಿ ಅಬ್ಬರಿಸಿದ್ದರು. ಇದಾಗ್ಯೂ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ಹೀಗಾಗಿ ಇದೀಗ ಕ್ಲಬ್ ಕ್ರಿಕೆಟ್ ಆಡುತ್ತಿದ್ದಾರೆ.
Published On - 2:24 pm, Sat, 8 June 24