- Kannada News Photo gallery Cricket photos Abhishek sharma, Youngest Indian to reach No.1 ICC T20 Rankings
ಐಸಿಸಿ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಅಭಿಷೇಕ್ ಶರ್ಮಾ
Abhishek sharma: ಅಭಿಷೇಕ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅದರಲ್ಲೂ ಐದನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 135 ರನ್ ಸಿಡಿಸಿದ್ದರು. ಈ ಭರ್ಜರಿ ಪ್ರದರ್ಶನದೊಂದಿಗೆ ಐಸಿಸಿ ರ್ಯಾಂಕಿಂಗ್ ನಲ್ಲಿ ಮೇಲೇರಿದ್ದ ಅಭಿಷೇಕ್ ಶರ್ಮಾ ಇದೀಗ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.
Updated on: Jul 31, 2025 | 7:57 AM

ಐಸಿಸಿ ಟಿ20 ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಟಾಪ್ 10 ಬ್ಯಾಟರ್ಗಳ ಪಟ್ಟಿಯಲ್ಲಿ ಈ ಬಾರಿ ಅಗ್ರಸ್ಥಾನ ಅಲಂಕರಿಸಿರುವುದು ಟೀಮ್ ಇಂಡಿಯಾದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ (Abhishek sharma). ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಭಿ ಇದೀಗ 829 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಈ ಮೂಲಕ ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ ಅಭಿಷೇಕ್ ಶರ್ಮಾ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 2014 ರಲ್ಲಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು. 26ನೇ ವಯಸ್ಸಿನಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದರು.

ಇದೀಗ ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಅಳಿಸಿ ಹಾಕಿದ್ದಾರೆ. 24ನೇ ವಯಸ್ಸಿನಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ಯುವ ಎಡಗೈ ದಾಂಡಿಗ ಟಿ20 ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಭಾರತೀಯನ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್‌ನಲ್ಲಿ 21ನೇ ಹಾಗೂ ಏಕದಿನದಲ್ಲಿ 22ನೇ ವಯಸ್ಸಿನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಇದೀಗ ಅಭಿಷೇಕ್ ಶರ್ಮಾ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟರ್ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.




