ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 10 ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದ ಸ್ಪಿನ್ನರ್ ಅಜಾಜ್ ಪಟೇಲ್ ಅವರನ್ನು ಇದೀಗ ನ್ಯೂಜಿಲೆಂಡ್ ತಂಡದಿಂದಲೇ ಕೈಬಿಡಲಾಗಿದೆ. ಹೌದು, ಈ ತಿಂಗಳ ಆರಂಭದಲ್ಲಿ ವಿಶ್ವ ಶ್ರೇಷ್ಠ ಬ್ಯಾಟರ್ಗಳಿಂದ ಕೂಡಿರುವ ಟೀಮ್ ಇಂಡಿಯಾದ 10 ವಿಕೆಟ್ಗಳನ್ನು ಕಬಳಿಸಿ ಅಜಾಜ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದರು.
ಜಿಮ್ ಲೇಕರ್ (Jim Laker) ಮತ್ತು ಅನಿಲ್ ಕುಂಬ್ಳೆ (Anil Kumble) ಬಳಿಕ ಒಂದೇ ಇನ್ನಿಂಗ್ಸ್ನಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಇವರು ಭಾಜನರಾಗಿದ್ದರು. ಇಂಥಹ ಅಪಾಯಕಾರಿ ಅತ್ಯುತ್ತಮ ಬೌಲರ್ ಅನ್ನು ನ್ಯೂಜಿಲೆಂಡ್ ಏಕಾಏಕಿ ತಂಡದಿಂದ ಹೊರಗಿಟ್ಟಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕಿವೀಸ್ ಕ್ರಿಕೆಟ್ ಮಂಡಳಿ ಅಜಾಜ್ ಪಟೇರ್ನಲ್ಲಿ ಕಡೆಗಣಿಸಿದೆ.
ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದ್ದು ಆಯ್ಕೆ ಸಮಿತಿ 13 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯೆಂದರೆ ಈ ಬಳಗದಲ್ಲಿ ಅಜಾಜ್ ಹೆಸರೇ ಇಲ್ಲ.
ಐತಿಹಾಸಿಕ ಸಾಧನೆ ಮಾಡಿದ ಹೊರತಾಗಿಯೂ ಅಜಾರ್ರನ್ನು ತಂಡದಿಂದಲೇ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಭಾರತ ಮೂಲದ ಮತ್ತೊಬ್ಬ ಆಟಗಾರ ರಚಿನ್ ರವೀಂದ್ರ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಬಾಂಗ್ಲಾ ವಿರುದ್ಧದ ಟೆಸ್ಟ್ ಡೇರಿಯಲ್ ಮಿಚೆಲ್ ಮತ್ತು ರವೀಂದ್ರ ಅವರನ್ನು ಸ್ಪಿನ್ನರ್ಗಳಾಗಿ ಆಯ್ಕೆ ಮಾಡಲಾಗಿದೆ. ಮೇಲ್ನೋಟಕ್ಕೆ ನ್ಯೂಜಿಲೆಂಡ್ ವೇಗಿಗಳಿಗೆ ಹೆಚ್ಚು ಒತ್ತು ನೀಡದಂತೆ ಕಾಣುತ್ತಿದೆ. ಟ್ರೆಂಟ್ ಬೌಲ್ಟ್, ನೈಲ್ ವಾಗ್ನರ್, ಟಿಮ್ ಸೌಥೀ, ಖೈಲ್ ಜೆಮಿಸನ್ ಮತ್ತು ಮ್ಯಾಟ್ ಹೆನ್ರಿ ಹೀಗೆ 5 ವೇಗಿಗಳನ್ನು ಆಯ್ಕೆ ಮಾಡಿದೆ.
ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಜುರಿಗೆ ತುತ್ತಾಗಿದ್ದರು. ಅವರು ಇನ್ನೂ ಗಾಯದಿಂದ ಗುಣಮುಖರಾಗದ ಕಾರಣ ಸಂಪೂರ್ಣ ಸರಣಿಗೆ ಟಾಮ್ ಲಾಥಮ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಡೆವೊನ್ ಕಾನ್ವೇ ಇಂಜುರಿಯಿಂದ ಗುಣಮುಖರಾಗಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇವರು ಟಿ20 ವಿಶ್ವಕಪ್ನಲ್ಲಿ ಗಾಯಕ್ಕೆ ತುತ್ತಾಗಿದ್ದರು.
ಬಾಂಗ್ಲಾ ವಿರುದ್ಧದ ಸರಣಿಗೆ ನ್ಯೂಜಿಲೆಂಡ್ ತಂಡ: ಟಾಮ್ ಲಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಡ್ಯಾರಲ್ ಮಿಚೆಲ್, ಟಾಮ್ ಬ್ಲಂಡೆಲ್, ರಚಿನ್ ರವೀಂದ್ರ, ಖೈಲ್ ಜೆಮಿಸನ್, ಮ್ಯಾಟ್ ಹೆನ್ರಿ, ಟಿಮ್ ಸೌಥೀ, ನೈಲ್ ವಾಗ್ನರ್, ಟ್ರೆಂಟ್ ಬೌಲ್ಟ್.
ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ಜನವರಿ 1 ರಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಮೊದಲ ಪಂದ್ಯ ಮೌಂಟ್ ಮೌಂಗನ್ಯೂಯ್ಯ ಬೇ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 9ರಿಂದ ಕ್ರೈಸ್ಟ್ ಚರ್ಚ್ನ ಹ್ಯಾಗ್ಲೆ ಓವಲ್ನಲ್ಲಿ ನಡೆಯಲಿದೆ.
Published On - 11:14 am, Thu, 23 December 21