
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಆದರೆ ಅದಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಮುಂಬೈ ತಂಡದಲ್ಲಿದ್ದ ಪ್ರಮುಖ ಸ್ಪಿನ್ನರ್ ಅಲ್ಲಾ ಗಝನ್‌ಫರ್ ಐಪಿಎಲ್ ಸೀಸನ್-18 ರಿಂದ ಹೊರಬಿದ್ದಿದ್ದಾರೆ.

ಅಫ್ಘಾನಿಸ್ತಾನ್ ತಂಡದ ಆಟಗಾರನಾಗಿರುವ ಅಲ್ಲಾ ಗಝನ್‌ಫರ್ ಅವರನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬರೋಬ್ಬರಿ 4.80 ಕೋಟಿ ರೂ. ನೀಡಿ ಖರೀದಿಸಿತ್ತು. ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ರಣತಂತ್ರ ರೂಪಿಸಲೆಂದೇ ಖರೀದಿಸಲಾಗಿದ್ದ ಆಟಗಾರ ಈಗ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಝಿಂಬಾಬ್ವೆ ವಿರುದ್ಧದ ಪಂದ್ಯದ ವೇಳೆ ಅಲ್ಲಾ ಗಝನ್‌ಫರ್ ಅವರ ಮೂಳೆ ಮುರಿತಕ್ಕೊಳಗಾಗಿದ್ದು, ಈ ಗಾಯದ ಕಾರಣ ಅವರು ಮುಂದಿನ 4 ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಅಲ್ಲಾ ಗಝನ್‌ಫರ್ ಅಲಭ್ಯರಾಗಿದ್ದಾರೆ.

ಇತ್ತ ಅಲ್ಲಾ ಗಝನ್‌ಫರ್ ಹೊರಗುಳಿದಿರುವ ಕಾರಣ ಮುಂಬೈ ಇಂಡಿಯನ್ಸ್ ಬದಲಿ ವಿದೇಶಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಅದರಲ್ಲೂ ಇತ್ತೀಚೆಗೆ ಮುಗಿದ ಸೌತ್ ಆಫ್ರಿಕಾ ಟಿ20 ಲೀಗ್ ಅಥವಾ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಮುಂಬೈ ಇಂಡಿಯನ್ಸ್ ಮುಂದಿದೆ. ಹೀಗಾಗಿ ಮುಂಬೈ ಪಡೆಗೆ ಬಲಿಷ್ಠ ಆಟಗಾರನ ಎಂಟ್ರಿಯನ್ನು ಎದುರು ನೋಡಬಹುದು.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಝ್, ಕರ್ಣ್ ಶರ್ಮಾ, ದೀಪಕ್ ಚಹರ್, ರೀಸ್ ಟೋಪ್ಲಿ, ರಿಯಾನ್ ರಿಕೆಲ್ಟನ್, ವಿಲ್ ಜ್ಯಾಕ್ಸ್, ಮಿಚೆಲ್ ಸ್ಯಾಂಟ್ನರ್, ಕರ್ಣ್ ಶರ್ಮಾ, ರಾಜ್ವ ಶರ್ಮಾ, ಸತ್ಯನಾರಾಯಣ ರಾಜು, ರಾಜ್ ಬಾವ, ಕೃಷ್ಣನ್ ಶ್ರೀಜಿತ್, ಅಶ್ವಾಣಿ ಕುಮಾರ್, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್, ಲಿಝಾಡ್ ವಿಲಿಯಮ್ಸ್.