
ವೆಸ್ಟ್ ಇಂಡೀಸ್ ದಿಗ್ಗಜ ಆ್ಯಂಡ್ರೆ ರಸೆಲ್ (Andre Russell) ಇಂಡಿಯನ್ ಪ್ರೀಮಿಯರ್ ಲೀಗ್ಗೆ ವಿದಾಯ ಹೇಳಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಬಿದ್ದಿರುವ ರಸೆಲ್ ಮುಂದಿನ ಸೀಸನ್ನಲ್ಲಿ ಬೇರೊಂದು ತಂಡದ ಪರ ಆಡಲು ಇಚ್ಛಿಸುತ್ತಿಲ್ಲ. ಹೀಗಾಗಿ ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಐಪಿಎಲ್ ಬೂಟುಗಳನ್ನು ನೇತುಹಾಕುತ್ತಿದ್ದೇನೆ... ಆದರೆ ಇದು ಸೊಕ್ಕಿನ ನಡೆಯಲ್ಲ. ಬದಲಾಗಿ ಕಳೆದ 12 ಸೀಸನ್ನಲ್ಲಿನ ನೆನಪುಗಳು ಮತ್ತು ಕೆಕೆಆರ್ ಕುಟುಂಬದೊಂದಿಗಿನ ಅಪಾರ ಪ್ರೀತಿ. ನಾನು ಇನ್ನೂ ಪ್ರಪಂಚದಾದ್ಯಂತದ ಪ್ರತಿಯೊಂದು ಲೀಗ್‌ನಲ್ಲಿ ಸಿಕ್ಸರ್‌ಗಳನ್ನು ಸಿಡಿಸುತ್ತೇನೆ ಮತ್ತು ವಿಕೆಟ್‌ಗಳನ್ನು ಪಡೆಯುತ್ತೇನೆ. ಆದರೆ ಖುಷಿಯ ವಿಚಾರ ಎಂದರೆ ನಾನು ಕೆಕೆಆರ್ ಅನ್ನು ಬಿಟ್ಟು ಹೋಗುತ್ತಿಲ್ಲ ಎಂದು ರಸೆಲ್ ತಿಳಿಸಿದ್ದಾರೆ.

ಹೌದು, ಐಪಿಎಲ್ಗೆ ವಿದಾಯ ಹೇಳಿರುವ ಆ್ಯಂಡ್ರೆ ರಸೆಲ್ ಮುಂದಿನ ಸೀಸನ್ನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ 'ಪವರ್ ಕೋಚ್' ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಕೆಕೆಆರ್ ಪರ ಹೊಸ ಇನಿಂಗ್ಸ್ ಆರಂಭಿಸುವುದನ್ನು ಸಹ ಐಪಿಎಲ್ ವಿದಾಯದ ವೇಳೆಯೇ ರಸೆಲ್ ಖಚಿತಪಡಿಸಿದ್ದಾರೆ.

2012 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಸತತ 12 ಸೀಸನ್ಗಳಲ್ಲಿ ಕೆಕೆಆರ್ ಪರ ಕಣಕ್ಕಿಳಿದಿದ್ದರು. ಇದಾಗ್ಯೂ 37 ವರ್ಷದ ರಸೆಲ್ ಅವರನ್ನು ಈ ಬಾರಿ ಕೆಕೆಆರ್ ಬಿಡುಗಡೆ ಮಾಡಿತ್ತು. ಇತ್ತ ರಿಲೀಸ್ ಆದ ಬೆನ್ನಲ್ಲೇ ರಸೆಲ್ ಐಪಿಎಲ್ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಕೆಕೆಆರ್ ಅವರನ್ನು ಪವರ್ ಕೋಚ್ ಆಗಿ ನೇಮಿಸಿರುವುದು ವಿಶೇಷ.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 139 ಪಂದ್ಯಗಳನ್ನಾಡಿರುವ ರಸೆಲ್ 115 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 12 ಅರ್ಧಶತಕಗಳೊಂದಿಗೆ 2651 ರನ್ ಕಲೆಹಾಕಿದ್ದಾರೆ. ಹಾಗೆಯೇ 123 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ 2014 ಮತ್ತು 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಆ್ಯಂಡ್ರೆ ರಸೆಲ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಕೆಕೆಆರ್ ಪರ 'ಪವರ್ ಕೋಚ್' ಆಗಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.