ಸ್ಫೋಟಕ ಸೆಂಚುರಿ… ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ
Abhishek sharma: ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಅಭಿಷೇಕ್ ಶರ್ಮಾ ಹೆಸರಿನಲ್ಲಿದೆ. 2024ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಭಿಷೇಕ್ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ಆರ್ಭಟಿಸಿರುವ ಯುವ ಎಡಗೈ ದಾಂಡಿಗ ಭರ್ಜರಿ ಶತಕದೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Updated on: Nov 30, 2025 | 11:11 AM

ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಶರ್ಮಾ (Abhishek sharma) ಸಿಡಿಲಬ್ಬರದ ಮುಂದುವರೆದಿದೆ. ಈ ಬಾರಿ ಅಬ್ಬರಿಸಿದ್ದು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ. ಅದು ಕೂಡ ಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ. ಈ ಸೆಂಚುರಿಯೊಂದಿಗೆ ವಿಶ್ವ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೈದಾರಾಬಾದ್ನ ಜಿಮ್ಖಾನ ಮೈದಾನದಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ ಪಂದ್ಯದಲ್ಲಿ ಪಂಜಾಬ್ ಹಾಗೂ ಬಂಗಾಳ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಪ್ರಭ್ ಸಿಮ್ರಾನ್ ಸಿಂಗ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಅದರಲ್ಲೂ ಬಂಗಾಳ ತಂಡದ ಅನುಭವಿ ಬೌಲರ್ಗಳ ಬೆಂಡೆತ್ತಿದ ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಯುವ ದಾಂಡಿಗ ಕೇವಲ 32 ಎಸೆತಗಳಲ್ಲಿ ಭರ್ಜರಿ ಸೆಂಚುರಿ ಪೂರೈಸಿದರು.

ಈ ಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಭಿಷೇಕ್ ಶರ್ಮಾಗೂ ಮುನ್ನ ಇಂತಹದೊಂದು ದಾಖಲೆ ಬರೆದಿರುವುದು ಗುಜರಾತ್ನ ಉರ್ವಿಲ್ ಪಟೇಲ್ ಎಂಬುದು ವಿಶೇಷ.

2024 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೇ ಉರ್ವಿಲ್ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ಉರ್ವಿಲ್ 31 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದೀಗ 32 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ 2024 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ್ ವಿರುದ್ಧ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ವೇಗದ ಶತಕ ಬಾರಿಸಿ 35ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಟಿ20 ಶತಕ ಬಾರಿಸಿದ ವಿಶ್ವದ ಮೊದಲ ಎಡಗೈ ದಾಂಡಿಗ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 16 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 148 ರನ್ ಬಾರಿಸಿದ್ದಾರೆ. ಮತ್ತೊಂದೆಡೆ ಪ್ರಭ್ ಸಿಮ್ರಾನ್ 35 ಎಸೆತಗಳಲ್ಲಿ 70 ರನ್ ಚಚ್ಚಿದ್ದಾರೆ. ಇನ್ನು ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ರಮಣ್ದೀಪ್ ಸಿಂಗ್ ಕೇವಲ 15 ಎಸೆತಗಳಲ್ಲಿ 39 ರನ್ ಬಾರಿಸಿದರು. ಈ ಮೂಲಕ ಪಂಜಾಬ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 310 ರನ್ ಕಲೆಹಾಕಿದೆ.
