ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದ ವರುಣ್ ಚಕ್ರವರ್ತಿ ಕೂದಲೆಳೆ ಅಂತರದಲ್ಲಿ ಗೋಲ್ಡನ್ ಬಾಲ್ ಗೆಲ್ಲುವುದರಿಂದ ವಂಚಿತರಾಗಿದ್ದರು. ಆಡಿದ ಮೂರೇ ಮೂರು ಪಂದ್ಯಗಳಲ್ಲಿ ಬರೋಬ್ಬರಿ 9 ವಿಕೆಟ್‌ಗಳನ್ನು ಉರುಳಿಸಿದ್ದ ವರುಣ್, ಟೂರ್ನಿಯಲ್ಲಿ ಅಧಿಕ ವಿಕೆಟ್‌ಗಳನ್ನು ಉರುಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.
ತಮ್ಮ ಅಮೋಘ ಪ್ರದರ್ಶನದಿಂದ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವರುಣ್ ಚಕ್ರವರ್ತಿ ಇದೀಗ ಐಸಿಸಿ ಏಕದಿನ ಬೌಲರ್‌ಗಳ ರ್ಯಾಂಕಿಂಗ್ನಲ್ಲಿ ಮತ್ತೊಮ್ಮೆ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಕಳೆದ ವಾರದ ರ್ಯಾಂಕಿಂಗ್ನಲ್ಲಿ ಬರೋಬ್ಬರಿ 100 ಬೌಲರ್ಗಳನ್ನು ಹಿಂದಿಕ್ಕಿದ್ದ ವರುಣ್ ಅಗ್ರ ನೂರರೊಳಕ್ಕೆ ಎಂಟ್ರಿಕೊಟ್ಟಿದ್ದರು.
ಕಳೆದ ವಾರದ ರ್ಯಾಂಕಿಂಗ್ನಲ್ಲಿ 96ನೇ ಸ್ಥಾನಕ್ಕೇರಿದ್ದ ವುರಣ್, ಇದೀಗ ಈ ವಾರದ ರ್ಯಾಂಕಿಂಗ್ನಲ್ಲಿ ತಮ್ಮ ನಾಗಾಲೋಟವನ್ನು ಮುಂದುವರೆಸಿದ್ದು, 16 ಬೌಲರ್ಗಳನ್ನು ಹಿಂದಿಕ್ಕಿ ನೂತನ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ 80 ನೇ ಸ್ಥಾನವನ್ನು ತಲುಪಿದ್ದಾರೆ.
ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕವನ್ನು ನೋಡಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿನ ಅದ್ಭುತ ಪ್ರದರ್ಶನದಿಂದ ಪ್ರಯೋಜನ ಪಡೆಯದ ಏಕೈಕ ವ್ಯಕ್ತಿ ವರುಣ್ ಚಕ್ರವರ್ತಿ. ಅವರಲ್ಲದೆ, ಕುಲ್ದೀಪ್ ಯಾದವ್ ಕೂಡ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಹೊಸ ಏಕದಿನ ಶ್ರೇಯಾಂಕದಲ್ಲಿ ಕುಲ್ದೀಪ್ ಯಾದವ್ 3 ಸ್ಥಾನ ಜಿಗಿದಿದ್ದಾರೆ. ಅಂದರೆ ಅವರು 6 ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಏರಿದ್ದಾರೆ.
ಕುಲ್ದೀಪ್ ಯಾದವ್ ಹೊರತುಪಡಿಸಿ, ಚಾಂಪಿಯನ್ಸ್ ಟ್ರೋಫಿಯಲ್ಲಿ 5 ವಿಕೆಟ್ ಪಡೆದಿದ್ದ ರವೀಂದ್ರ ಜಡೇಜಾ ಕೂಡ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಬೌಲರ್‌ಗಳ ಹೊಸ ಶ್ರೇಯಾಂಕದಲ್ಲಿ 3 ಸ್ಥಾನ ಮೇಲೇರಿ 10 ನೇ ಸ್ಥಾನಕ್ಕೆ ಬಂದಿದ್ದಾರೆ.
ಏಕದಿನ ರ್ಯಾಂಕಿಂಗ್ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ವರುಣ್ಗೆ ಬಿಸಿಸಿಐ ಕಡೆಯಿಂದಲೂ ಭರ್ಜರಿ ಬಹುಮಾನ ಸಿಗುವ ಸಾಧ್ಯತೆಗಳಿವೆ. ವಾಸ್ತವವಾಗಿ ಬಿಸಿಸಿಐ ತನ್ನ ಕೇಂದ್ರ ಒಪ್ಪಂದವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು, ಹೊಸ ವಾರ್ಷಿಕ ಒಪ್ಪಂದದಲ್ಲಿ ವರುಣ್ ಚಕ್ರವರ್ತಿ ಕೂಡ ಜಾಕ್‌ಪಾಟ್ ಹೊಡೆಯುವ ನಿರೀಕ್ಷೆಯಿದೆ. ಈ ಮೂಲಕ ವರುಣ್, ಕೋಟಿ ಮೊತ್ತದ ವೇತನ ಪಡೆಯಲ್ಲಿದ್ದಾರೆ.