- Kannada News Photo gallery Cricket photos Kannada News | Ashes 2023: England vs Australia 1st Test Day 3 Highlights
Ashes 2023: 3ನೇ ದಿನದಾಟ ಮಳೆಗೆ ಆಹುತಿ: ಇಂಗ್ಲೆಂಡ್ ತಂಡಕ್ಕೆ ಅಲ್ಪ ಮುನ್ನಡೆ
Ashes 2023: ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 67 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸೀಸ್ ತಂಡಕ್ಕೆ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಆಸರೆಯಾದರು.
Updated on: Jun 18, 2023 | 11:27 PM

Ashes 2023: ಇಂಗ್ಲೆಂಡ್-ಆಸ್ಟ್ರೇಲಿಯಾ (England vs Australia) ನಡುವೆ ನಡೆಯುತ್ತಿರುವ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟವು ಮಳೆಗೆ ಆಹುತಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಆರಂಭಿಕ ಝಾಕ್ ಕ್ರಾಲಿ (61) ಉತ್ತಮ ಆರಂಭ ಒದಗಿಸಿದರೆ, ಮತ್ತೊಂದೆಡೆ ಬೆನ್ ಡಕೆಟ್ (12) ಹಾಗೂ ಅಲಿ ಪೋಪ್ (31) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಜೋ ರೂಟ್ ಸ್ವಿಚ್ ಹಿಟ್ಗಳ ಮೂಲಕ ಗಮನ ಸೆಳೆದರು. ಅಲ್ಲದೆ ಆಸೀಸ್ ವೇಗಿಗಳನ್ನು ಮನಸೊ ಇಚ್ಛೆ ದಂಡಿಸುವ ಮೂಲಕ 152 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 118 ರನ್ ಬಾರಿಸಿದರು. ಅಲ್ಲದೆ ಮೊದಲ ದಿನದಾಟದಲ್ಲೇ 8 ವಿಕೆಟ್ ನಷ್ಟಕ್ಕೆ 393 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 67 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸೀಸ್ ತಂಡಕ್ಕೆ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಆಸರೆಯಾದರು.

ಆರಂಭದಿಂದಲೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಖ್ವಾಜಾ 199 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 2ನೇ ದಿನದಾಟವರೆಗೆ ಬ್ಯಾಟಿಂಗ್ ಕಾಯ್ದುಕೊಂಡು ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 311 ರನ್ಗೆ ತಂದು ನಿಲ್ಲಿಸಿದ್ದರು.

ಆದರೆ ಮೂರನೇ ದಿನದಾಟದ ಆರಂಭದಲ್ಲೇ ಮೇಲುಗೈ ಸಾಧಿಸಿದ ಇಂಗ್ಲೆಂಡ್ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. 66 ರನ್ಗಳಿಸಿದ್ದ ಅಲೆಕ್ಸ್ ಕ್ಯಾರಿಯ ವಿಕೆಟ್ ಪಡೆದು ಆಂಗ್ಲರು ಶುಭಾರಂಭ ಮಾಡಿದ್ದರು. ಇದರ ಬೆನ್ನಲ್ಲೇ ರಾಬಿನ್ಸನ್ ಉಸ್ಮಾನ್ ಖ್ವಾಜಾ (141) ಅವರ ವಿಕೆಟ್ ಉರುಳಿಸಿದರು.

ಖ್ವಾಜಾ ಔಟಾಗುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ಆಸ್ಟ್ರೇಲಿಯಾ ತಂಡವು 386 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ಹಾಗೂ ಒಲ್ಲಿ ರಾಬಿನ್ಸನ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

ಇತ್ತ ಪ್ರಥಮ ಇನಿಂಗ್ಸ್ನಲ್ಲಿ 393 ರನ್ಗಳನ್ನು ಬಾರಿಸಿದ್ದ ಇಂಗ್ಲೆಂಡ್ ತಂಡವು 7 ರನ್ಗಳ ಮುನ್ನಡೆ ದ್ವಿತೀಯ ಇನಿಂಗ್ಸ್ ಆರಂಭಿಸಿತು. ಆದರೆ ಇದೇ ವೇಳೆ ಮಳೆಯಾಗಿದ್ದರಿಂದ ಪಂದ್ಯವನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.

ಆ ಬಳಿಕ ಪುನರಾರಂಭಗೊಂಡ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಮೇಲುಗೈ ಸಾಧಿಸಿದರು. ಪ್ಯಾಟ್ ಕಮಿನ್ಸ್ ಬೆನ್ ಡಕೆಟ್ (19) ರನ್ನು ಔಟ್ ಮಾಡಿದರೆ, ಅತ್ತ ಬೋಲ್ಯಾಂಡ್ ಡೇಂಜರಸ್ ಝಾಕ್ ಕ್ರಾಲಿ (7) ವಿಕೆಟ್ ಪಡೆದರು.

ಇದೇ ವೇಳೆ ಮತ್ತೆ ವರುಣ ಅಡ್ಡಿಯಾಗಿದ್ದರಿಂದ 3ನೇ ದಿನದಾಟವನ್ನು ಸ್ಥಗಿತಗೊಳಿಸಲಾಯಿತು. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 2 ವಿಕೆಟ್ ನಷ್ಟಕ್ಕೆ 28 ರನ್ ಕಲೆಹಾಕಿದೆ. ಅಲ್ಲದೆ 35 ರನ್ಗಳ ಮುನ್ನಡೆಯೊಂದಿಗೆ ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಒಲ್ಲಿ ಪೋಪ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
