Ashes 2023: 600 ಟೆಸ್ಟ್ ವಿಕೆಟ್; ಆ್ಯಶಸ್ನಲ್ಲಿ ಮತ್ತೊಂದು ದಾಖಲೆ ಬರೆದ ಸ್ಟುವರ್ಟ್ ಬ್ರಾಡ್..!
Stuart Broad, Ashes 2023: ಆಸೀಸ್ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಬ್ರಾಡ್ ತಮ್ಮ 600 ನೇ ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದರು.
Updated on: Jul 20, 2023 | 7:06 AM

ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಆ್ಯಶಸ್ ಟೆಸ್ಟ್‌ನ ಮೊದಲ ದಿನದಂದು ಆಸೀಸ್ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಬ್ರಾಡ್ ತಮ್ಮ 600 ನೇ ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದರು. ಬ್ರಾಡ್ ತಮ್ಮ 165ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಇದರೊಂದಿಗೆ, 37 ವರ್ಷದ ಸ್ಟುವರ್ಟ್ ಬ್ರಾಡ್ ಟೆಸ್ಟ್‌ನಲ್ಲಿ 600 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಎರಡನೇ ವೇಗಿ ಮತ್ತು ಒಟ್ಟಾರೆ ಐದನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮುಂಚೂಣಿಯಲ್ಲಿದ್ದು, ಅವರ ಹೆಸರಿನಲ್ಲಿ 800 ವಿಕೆಟ್‌ಗಳಿವೆ.

ವೇಗದ ಬೌಲರ್‌ಗಳಲ್ಲಿ ಬ್ರಾಡ್‌ನ ಜೊತೆಗಾರ ಜೇಮ್ಸ್ ಆಂಡರ್ಸನ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆ್ಯಂಡರ್ಸನ್ ಇದುವರೆಗೆ ಆಡಿರುವ 181 ಟೆಸ್ಟ್ ಪಂದ್ಯಗಳಲ್ಲಿ 688 ವಿಕೆಟ್ ಪಡೆದಿದ್ದಾರೆ.

ಇಷ್ಟೇ ಅಲ್ಲ, ಆಸ್ಟ್ರೇಲಿಯಾ ವಿರುದ್ಧ 149 ನೇ ಟೆಸ್ಟ್ ವಿಕೆಟ್ ಉರುಳಿಸಿದ ಬ್ರಾಡ್, ಆಸೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆ ಬರೆದಿದ್ದ ತಮ್ಮದೇ ದೇಶದ ಇಯಾನ್ ಬೋಥಮ್ (148) ಅವರನ್ನೂ ಸಹ ಹಿಂದಿಕ್ಕಿದ್ದಾರೆ.

ಇನ್ನು ಈ ನಾಲ್ಕನೇ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿದೆ. ತಂಡದ ಪರ ಲಬುಶೇನ್ ಹಾಗೂ ಶಾನ್ ಮಾರ್ಷ್ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಉಳಿದವರಿಂದ ಸಪ್ಪೆ ಪ್ರದರ್ಶನ ಕಂಡು ಬಂದಿದೆ.

ಹಾಗೆಯೇ ಇಂಗ್ಲೆಂಡ್ ಪರ ವೇಗಿ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದು ಮಿಂಚಿದರೆ, ಸ್ಟುವರ್ಟ್ ಬ್ರಾಡ್ 2, ಮಾರ್ಕ್ವುಡ್ ಹಾಗೂ ಮೊಯಿನ್ ಅಲಿ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.




