- Kannada News Photo gallery Cricket photos Ashish Nehra breaks silence on why he is hesitant to take India's coaching responsibility
‘ನನ್ನ ಮಕ್ಕಳು ಇನ್ನೂ ಚಿಕ್ಕವರು’; ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸದಿರಲು ಕಾರಣ ತಿಳಿಸಿದ ಆಶಿಶ್ ನೆಹ್ರಾ
Ashish Nehra: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸದಿರುವ ಬಗ್ಗೆ ಮಾತನಾಡಿರುವ ಆಶಿಶ್ ನೆಹ್ರಾ, ‘ನಾನು ಇನ್ನೂ ಕೋಚ್ ಹುದ್ದೆ ಬಗ್ಗೆ ಯೋಚಿಸಿಲ್ಲ. ನನ್ನ ಮಕ್ಕಳು ಇನ್ನೂ ಚಿಕ್ಕವರು. ಹೌದು, ಗೌತಮ್ ಗಂಭೀರ್ ಅವರ ಮಕ್ಕಳು ಕೂಡ ಇನ್ನು ಚಿಕ್ಕವರು. ಅದಾಗ್ಯೂ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಸದ್ಯ ನಾನು ತಂಡದೊಂದಿಗೆ ದೀರ್ಘ ಪ್ರಯಾಣ ಮಾಡುವ ಮನಸ್ಥಿತಿಯಲಿಲ್ಲ ಎಂದಿದ್ದಾರೆ.
Updated on: Jul 25, 2024 | 3:22 PM

2024 ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಕೇಳಿಬರುತ್ತಿದ್ದ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬ ಪ್ರಶ್ನೆಗೆ ಟಿ20 ವಿಶ್ವಕಪ್ ಮುಗಿದ ಬಳಿಕ ಉತ್ತರ ಸಿಕ್ಕಿತ್ತು. ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಮತ್ತೊಬ್ಬ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗುವ ಮೂಲಕ ಹಲವು ಗೊಂದಲಗಳಿಗೆ ತೆರೆ ಎಳೆಯಲಾಗಿತ್ತು.

ವಾಸ್ತವವಾಗಿ ಗೌತಮ್ ಗಂಭೀರ್ಗೂ ಮುನ್ನ ಹಲವು ಮಾಜಿ ಆಟಗಾರರ ಹೆಸರು ಮುನ್ನಲೆಗೆ ಬಂದಿತ್ತು. ಅವರಲ್ಲಿ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಹಾಗೂ ಗುಜರಾತ್ ಟೈಟಾನ್ಸ್ ತಂಡವನ್ನು ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಮಾಡಿದ್ದ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿತ್ತು.

ಆದರೆ ಅಚ್ಚರಿ ಎಂಬಂತೆ ಈ ಇಬ್ಬರೂ ಕೂಡ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಲು ನಿರಾಕರಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವಿವಿಎಸ್ ಲಕ್ಷ್ಮಣ್ ತಂಡದೊಂದಿಗೆ ಸುಧೀರ್ಘ ಪ್ರಯಾಣ ಮಾಡಲು ಹಾಗೂ ಹೆಚ್ಚು ಸಮಯ ಕುಟುಂಬದಿಂದ ದೂರವಿರಲು ಸಾಧ್ಯವಿಲ್ಲ ಎಂದಿದ್ದರು. ಆದರೆ ನೆಹ್ರಾ ಮಾತ್ರ ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿರಲಿಲ್ಲ.

ಆದರೀಗ ಆ ಬಗ್ಗೆ ಮೌನ ಮುರಿದಿರುವ ಆಶಿಶ್ ನೆಹ್ರಾ, ‘ನಾನು ಇನ್ನೂ ಕೋಚ್ ಹುದ್ದೆ ಬಗ್ಗೆ ಯೋಚಿಸಿಲ್ಲ. ನನ್ನ ಮಕ್ಕಳು ಇನ್ನೂ ಚಿಕ್ಕವರು. ಹೌದು, ಗೌತಮ್ ಗಂಭೀರ್ ಅವರ ಮಕ್ಕಳು ಕೂಡ ಇನ್ನು ಚಿಕ್ಕವರು. ಅದಾಗ್ಯೂ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಸದ್ಯ ನಾನು ತಂಡದೊಂದಿಗೆ ದೀರ್ಘ ಪ್ರಯಾಣ ಮಾಡುವ ಮನಸ್ಥಿತಿಯಲಿಲ್ಲ ಎಂದಿದ್ದಾರೆ.

ಇನ್ನು ನೆಹ್ರಾ ಅವರ ಕೋಚಿಂಗ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಈ ಎಡಗೈ ವೇಗಿ, ಐಪಿಎಲ್‌ನಲ್ಲಿ ತಮ್ಮ ಕೋಚಿಂಗ್ ವೃತ್ತಿಜೀವನದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಒಮ್ಮೆ ಚಾಂಪಿಯನ್ ಮತ್ತು ಒಮ್ಮೆ ರನ್ನರ್ ಅಪ್ ಮಾಡಿದ್ದಾರೆ. ಅಲ್ಲದೆ ನೆಹ್ರಾ ಐಪಿಎಲ್‌ನ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾಗಿದ್ದು, ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಇತರ ಫ್ರಾಂಚೈಸಿಗಳು ಮುಗಿಬಿದ್ದಿವೆ. ಸದ್ಯದ ಮಾಹಿತಿ ಪ್ರಕಾರ, ಮುಂದಿನ ಆವೃತ್ತಿಗೂ ಮುನ್ನ ನೆಹ್ರಾ, ಗುಜರಾತ್ ತಂಡವನ್ನು ತೊರೆಯಬಹುದು ಎನ್ನಲಾಗಿದೆ.

ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಅವರ ಸಾರಥ್ಯದಲ್ಲಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ತಲುಪಿದ್ದು, ತಂಡ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಗಂಭೀರ್ ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಮೆಂಟರ್ ಆಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಕೊಂಡೊಯ್ದಿದ್ದಾರೆ. ಅದಕ್ಕೂ ಮೊದಲು, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗೌತಮ್ ಗಂಭೀರ್ ಭಾರತ ಪರ 58 ಟೆಸ್ಟ್ ಪಂದ್ಯಗಳನ್ನಾಡಿದ್ದು, 4154 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗಂಭೀರ್ ಟೀಂ ಇಂಡಿಯಾ ಪರ 147 ಪಂದ್ಯಗಳಲ್ಲಿ 5238 ರನ್ ಮತ್ತು 37 ಟಿ20 ಪಂದ್ಯಗಳಲ್ಲಿ 932 ರನ್ ಗಳಿಸಿದ್ದಾರೆ.

ಅದೇ ಸಮಯದಲ್ಲಿ, ಆಶಿಶ್ ನೆಹ್ರಾ ಅವರು ಟೀಮ್ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 44 ವಿಕೆಟ್ಗಳನ್ನು ಪಡೆದಿದ್ದಾರೆ. ಇದಲ್ಲದೇ ನೆಹ್ರಾ 120 ಏಕದಿನ ಪಂದ್ಯಗಳಲ್ಲಿ 157 ವಿಕೆಟ್ ಹಾಗೂ 27 ಟಿ20 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.




