- Kannada News Photo gallery Cricket photos Asia cup 2025 going to be Heartbreak for Punjab Kings Captain Shreyas Iyer
ಟೀಮ್ ಇಂಡಿಯಾದಿಂದ ಶ್ರೇಯಸ್ ಅಯ್ಯರ್ನನ್ನು ಕೈ ಬಿಡಲು ಕಾರಣಗಳೇ ಇಲ್ಲ..!
Asia Cup 2025: ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಯುಎಇ, ಹಾಂಗ್ ಕಾಂಗ್, ಒಮಾನ್.
Updated on: Aug 17, 2025 | 11:07 AM

ಏಷ್ಯಾಕಪ್ಗಾಗಿ ಇದೇ ವಾರದಲ್ಲಿ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ. ಆದರೆ ಈ ತಂಡದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಏಕೆಂದರೆ ಈ ಬಾರಿ ಯುವ ಪಡೆಯನ್ನು ಕಣಕ್ಕಿಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಇದರಿಂದ ಶ್ರೇಯಸ್ ಅಯ್ಯರ್ ಅವಕಾಶ ವಂಚಿತರಾಗಲಿದ್ದಾರೆ ಎಂದು ವರದಿಯಾಗಿದೆ.

ಆದರೆ ಇತ್ತ ಆಯ್ಕೆ ಸಮಿತಿಗೆ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಲು ನಿರ್ದಿಷ್ಟ ಕಾರಣಗಳಿಲ್ಲ ಎಂಬುದೇ ಸತ್ಯ. ಏಕೆಂದರೆ ದೇಶೀಯ ಅಂಗಳದಲ್ಲಿನ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಅಯ್ಯರ್ ಅಗ್ರಸ್ಥಾನದಲ್ಲಿದ್ದಾರೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಅದ್ಭುತ ಪ್ರದರ್ಶನ ನೀಡಿದ್ದಾರೆ.

ದೇಶೀಯ ಅಂಗಳದ ಟಿ20 ಟೂರ್ನಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿನ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಶ್ರೇಯಸ್ ಅಯ್ಯರ್ ಕಳೆದ ಸೀಸನ್ನಲ್ಲಿ ಅತ್ತುತ್ತಮ ಪ್ರದರ್ಶನ ನೀಡಿದ್ದಾರೆ. 2024ರ ಸೀಸನ್ನಲ್ಲಿ 8 ಇನಿಂಗ್ಸ್ ಆಡಿದ್ದ ಅಯ್ಯರ್ ಒಟ್ಟು 345 ರನ್ ಕಲೆಹಾಕಿದ್ದಾರೆ. ಅದು ಕೂಡ 188.52 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇನ್ನು ಐಪಿಎಲ್ನಲ್ಲಿನ ಪ್ರದರ್ಶನವನ್ನು ತೆಗೆದುಕೊಂಡರೆ, ಕಳೆದ ಸೀಸನ್ನಲ್ಲಿ 17 ಪಂದ್ಯಗಳಿಂದ ಅಯ್ಯರ್ ಕಲೆಹಾಕಿರುವುದು ಬರೋಬ್ಬರಿ 604 ರನ್ಗಳು. ಅದು ಸಹ 175.07ರ ಸ್ಟ್ರೈಕ್ ರೇಟ್ನಲ್ಲಿ ಅಂದರೆ ದೇಶೀಯ ಟಿ20 ಟೂರ್ನಿ ಹಾಗೂ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ 175+ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಹೀಗಾಗಿಯೇ ಏಷ್ಯಾಕಪ್ ತಂಡದ ಆಯ್ಕೆಗೆ ಶ್ರೇಯಸ್ ಅಯ್ಯರ್ ಅರ್ಹರು. ಇದಾಗ್ಯೂ ಶ್ರೇಯಸ್ ಅಯ್ಯರ್ಗೆ ಅವಕಾಶ ಸಿಗುವುದಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸುದ್ದಿಗಳ ಬಗ್ಗೆ ಸ್ಪಷ್ಟತೆ ಸಿಗಲು ಆಗಸ್ಟ್ 19 ರವರೆಗೆ ಕಾಯಲೇಬೇಕು. ಅಂದರೆ ಮುಂದಿನ ಮಂಗಳವಾರ ಏಷ್ಯಾಕಪ್ಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗುತ್ತದೆ. ಈ ವೇಳೆ ಶ್ರೇಯಸ್ ಅಯ್ಯರ್ ಹೆಸರು ಕಾಣಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
