
ಸೆಪ್ಟೆಂಬರ್ 14 ರಂದು ಅಂದರೆ ಇಂದು 2025 ರ ಏಷ್ಯಾಕಪ್‌ನಲ್ಲಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ತಲಾ ಒಂದೊಂದು ಗೆಲುವಿನೊಂದಿಗೆ ಈ ಪಂದ್ಯಕ್ಕೆ ಕಾಲಿಡುತ್ತಿವೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ.

ಉಭಯ ತಂಡಗಳಲ್ಲೂ ಪ್ರತಿಭಾವಂತ ಆಟಗಾರರಿದ್ದಾರೆ. ಆದರೆ ಟೀಂ ಇಂಡಿಯಾಕ್ಕೆ ಹೋಲಿಸಿದರೆ, ಪಾಕಿಸ್ತಾನ ತಂಡದಲ್ಲಿ ಅನುಭವದ ಕೊರತೆ ಎದ್ದು ಕಾಣಿಸುತ್ತದೆ. ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿರುವ 8 ಆಟಗಾರರು ಪಾಕಿಸ್ತಾನದ ವಿರುದ್ಧ ಒಂದಿಲ್ಲೊಂದು ಮಾದರಿಯಲ್ಲಿ ಪಂದ್ಯವನ್ನಾಡಿದ್ದಾರೆ. ಆದರೆ ಪಾಕ್ ತಂಡದಲ್ಲಿ ಅಂತಹವರ ಸಂಖ್ಯೆ ಕಡಿಮೆ ಇದೆ.

ಹಾಗೆಯೇ ಭಾರತದ ಬಲಿಷ್ಠ ಬೌಲಿಂಗ್ ವಿಭಾಗವನ್ನು ಎದುರಿಸುವುದು ಪಾಕ್ ಅನಾನುಭವಿ ಬ್ಯಾಟಿಂಗ್ ವಿಭಾಗಕ್ಕೆ ಕಷ್ಟ ಸಾಧ್ಯ. ಇದರ ಜೊತೆಗೆ ಪಾಕಿಸ್ತಾನದ ವಿರುದ್ಧ ಬುಮ್ರಾ ಹೊಂದಿರುವ ಅದೊಂದು ದಾಖಲೆಯನ್ನು ಮುರಿಯುವುದು ಸಹ ಪಾಕ್ ತಂಡಕ್ಕೆ ಸವಾಲಿನ ಕೆಲಸವಾಗಿದೆ.

ವಾಸ್ತವವಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬುಮ್ರಾ ವಿರುದ್ಧ ಪಾಕಿಸ್ತಾನ ತಂಡದ ಒಬ್ಬನೇ ಒಬ್ಬ ಬ್ಯಾಟ್ಸ್ಮನ್ಗೆ ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. ಬುಮ್ರಾ ಇದುವರೆಗೆ ಪಾಕಿಸ್ತಾನ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 391 ಎಸೆತಗಳನ್ನು ಎಸೆದಿದ್ದಾರೆ. ಆದರೆ ಅವರ ಯಾವುದೇ ಎಸೆತದಲ್ಲಿ ಪಾಕ್ ಆಟಗಾರರಿಗೆ ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ.

ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯುತ್ತಿರುವ ಕಾರಣ ಈ ಪಂದ್ಯವು ಪಾಕಿಸ್ತಾನಿ ಆಟಗಾರರಿಗೆ ಮಾತ್ರ ಸೀಮಿತವಾಗಿರದೆ ಬುಮ್ರಾ ವಿರುದ್ಧ ಸಿಕ್ಸರ್ ಬಾರಿಸುವ ಮುಕ್ತ ಸವಾಲಾಗಿದೆ. ಬುಮ್ರಾ ತನ್ನ 391 ಎಸೆತಗಳಿಗೆ ಸಿಕ್ಸರ್ ಇಲ್ಲದೆ ಇನ್ನೂ ಕೆಲವು ಎಸೆತಗಳನ್ನು ಸೇರಿಸುತ್ತಾರೋ ಅಥವಾ ಯಾವುದೇ ಪಾಕಿಸ್ತಾನಿ ಆಟಗಾರ ಬುಮ್ರಾ ಅವರ ಆ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗುತ್ತಾರೋ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.

ಬುಮ್ರಾ ಟೀಂ ಇಂಡಿಯಾದಲ್ಲಿ ಇರುವುದು ಏಷ್ಯಾಕಪ್ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುವಂತಿದೆ. ಏಕೆಂದರೆ ಬುಮ್ರಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಾಗಲೆಲ್ಲ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಬುಮ್ರಾ ಇಲ್ಲಿಯವರೆಗೆ ಆಡಿರುವ 12 ಪಂದ್ಯಗಳಲ್ಲಿಯೂ ಭಾರತ ತಂಡ ಗೆಲುವು ಸಾಧಿಸಿದೆ. ಅಲ್ಲದೆ ಆ 12 ಪಂದ್ಯಗಳಲ್ಲಿ ಬುಮ್ರಾ ವಿಕೆಟ್ ಪಡೆಯದೆ ಒಂದೇ ಒಂದು ಪಂದ್ಯವೂ ನಡೆದಿಲ್ಲ. ಅಂದರೆ ಈ 12 ಪಂದ್ಯಗಳಲ್ಲಿ ಬುಮ್ರಾ ಕನಿಷ್ಠ ಒಂದು ವಿಕೆಟ್ನಾದರೂ ಪಡೆದಿದ್ದಾರೆ.
Published On - 10:34 am, Sun, 14 September 25