
2025 ರ ಏಷ್ಯಾಕಪ್ಗೆ ಭಾರತ ಟಿ20 ತಂಡವನ್ನು ಆಯ್ಕೆ ಮಾಡಲಾಗಿದೆ. ಮೀಸಲು ಆಟಗಾರರು ಸೇರಿದಂತೆ ಒಟ್ಟು 20 ಸದಸ್ಯರನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಆದಾಗ್ಯೂ ಆಯ್ಕೆಯಾಗಿರುವ ಈ 20 ಆಟಗಾರರಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಕೆಲವರ ಸ್ಥಾನ ಈಗಾಗಲೇ ಖಚಿತವಾಗಿದೆಯಾದರೂ, ಇನ್ನು ಕೆಲವರು ತಮ್ಮ ಸ್ಥಾನವನ್ನು ಮಾತ್ರವಲ್ಲದೆ ಪ್ಲೇಯಿಂಗ್ 11 ನಿಂದಲೂ ಹೊರಬೀಳುವ ಸಾಧ್ಯತೆಗಳಿವೆ.

ಆ ರೀತಿ ಆಡುವ ಹನ್ನೊಂದರ ಬಳಗದಿಂದ ಹೊರಬೀಳಬಹುದಾದ ಆಟಗಾರರ ಪಟ್ಟಿಯಲ್ಲಿ ಆರಂಭಿಕ ಸಂಜು ಸ್ಯಾಮ್ಸನ್ ಅವರ ಹೆಸರು ಮುಂಚೂಣಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಟಿ20 ತಂಡದ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಸಂಜು, ಇದೀಗ ತಮ್ಮ ಆರಂಭಿಕ ಸ್ಥಾನವನ್ನು ಕಳೆದುಕೊಳ್ಳುವ ಸನಿಹದಲ್ಲಿದ್ದಾರೆ.

ವಾಸ್ತವವಾಗಿ, ಸಂಜು ಅವರ ಇತ್ತೀಚಿನ ಟಿ20 ಫಾರ್ಮ್ ಸ್ವಲ್ಪ ಕಳಪೆಯಾಗಿದೆ. ಕಳೆದ 5 ಟಿ20 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 51 ರನ್ ಮಾತ್ರ ಗಳಿಸಿದ್ದಾರೆ. ಆದರೆ ಅದಕ್ಕೂ ಮೊದಲು, ಅವರು ಆಡಿದ 5 ಇನ್ನಿಂಗ್ಸ್‌ಗಳಲ್ಲಿ 3 ಶತಕಗಳನ್ನು ಬಾರಿಸಿದ್ದರು. ಅಂದರೆ, ಸಂಜು ಸ್ಯಾಮ್ಸನ್ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಎನ್ನಬಹುದು.

ಆದರೀಗ ಏಷ್ಯಾಕಪ್ಗೆ ಪ್ರಕಟವಾಗಿರುವ ತಂಡದಲ್ಲಿ ಸಂಜು ಆರಂಭಿಕನಾಗಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಏಕೆಂದರೆ ಅವರ ಜಾಗಕ್ಕೆ ಶುಭ್‌ಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಸಾಲದೆಂಬಂತೆ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಇದರರ್ಥ ತಂಡದಲ್ಲಿ ಗಿಲ್ ಆಡುವುದು ಖಚಿತವಾಗಿದೆ. ಹೀಗಿರುವಾಗ ಸಂಜು ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು.

ಸಂಜು ಸ್ಯಾಮ್ಸನ್ ಈ ಚುಟುಕು ಮಾದರಿಯಲ್ಲಿ ಆರಂಭಿಕನಾಗಿ ಆಡಿದ್ದೆ ಹೆಚ್ಚು. ಹೀಗಿರುವಾಗ ಅವರನ್ನು ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣುವುದು ಸ್ವಲ್ಪ ಕಷ್ಟ. ಅಲ್ಲದೆ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಜಿತೇಶ್ ಶರ್ಮಾ ಈ ಹಿಂದೆ ಐಪಿಎಲ್‌ನಲ್ಲಿ ಆರ್ಸಿಬಿ ಪರ ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸಂಜು ಬದಲಿಗೆ ಜಿತೇಶ್ಗೆ ಆಯ್ಕೆದಾರರು ಮಣೆ ಹಾಕಿದರೆ ಅಚ್ಚರಿ ಪಡಬೇಕಾಗಿಲ್ಲ.

ಇನ್ನು ಸಂಜುರನ್ನು ಆರಂಭಿಕನಾಗಿ ಅಲ್ಲದೆ ಬೇರೆ ಕ್ರಮಾಂಕದಲ್ಲಿ ಆಡಿಸಬಹುದು ಅಂದುಕೊಂಡರೆ, ಅದು ಕೂಡ ಆಗದ ಮಾತು. ಏಕೆಂದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಎಡ, ಬಲ ಸಂಯೋಜನೆಯನ್ನು ಪರಿಗಣನೆಗೆ ತೆಗದುಕೊಂಡರೆ, ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಬರಲಿದ್ದಾರೆ. ಆ ಬಳಿಕ ಸೂರ್ಯ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಬರಲಿದ್ದಾರೆ.

ಹೀಗಾಗಿ ಒಂದು ವೇಳೆ ಸಂಜು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ ಅವರಿಗೆ ಯಾವ ಕ್ರಮಾಂಕ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದೆಲ್ಲವನ್ನು ಗಮನಿಸಿದಾಗ ಒಂದು ಸಮಯದಲ್ಲಿ ಸಂಜು ಸ್ಯಾಮ್ಸನ್ರನ್ನು ಹಾಡಿ ಹೊಗಳಿದ್ದ ಮುಖ್ಯ ಕೋಚ್ ಗೌತಮ್ ಗಂಭೀರ್, ಇದೀಗ ತಮ್ಮ ಅಧಿಕಾರವದಿಯಲ್ಲಿ ಸಂಜುರನ್ನು ಕಡೆಗಣಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ.

ವಾಸ್ತವವಾಗಿ ಇದೇ ಗೌತಮ್ ಗಂಭೀರ್ 2020 ರಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಸಂಜುರನ್ನು ಹೊಗಳಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ಸಂಜು ಸ್ಯಾಮ್ಸನ್ ಭಾರತದ ಅತ್ಯುತ್ತಮ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್. ನನ್ನ ಈ ನಿಲುವಿನ ಬಗ್ಗೆ ಯಾರಾದರೂ ಚರ್ಚೆಗೆ ಸಿದ್ಧರಿದ್ದೀರಾ?" ಎಂಬ ಪ್ರಶ್ನೆಯನ್ನು ಕೂಡ ತಮ್ಮ ಪೋಸ್ಟ್‌ನಲ್ಲಿ ಕೇಳಿದ್ದರು. ಐದು ವರ್ಷಗಳ ಹಿಂದೆ ಸಂಜು ಬಗ್ಗೆ ಈ ರೀತಿಯ ಅಭಿಪ್ರಾಯ ಹೊಂದಿದ್ದ ಗಂಭೀರ್, ಇದೀಗ ಅವರನ್ನು ಟಿ20 ತಂಡದಿಂದ ಹೊರಹಾಕಲು ನೋಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.
Published On - 6:15 pm, Wed, 20 August 25