ICC Rankings: ಆಸೀಸ್ ವಿರುದ್ಧ ಅಬ್ಬರಿಸಿ ಬರೋಬ್ಬರಿ 89 ಸ್ಥಾನ ಮೇಲೇರಿದ ಡೆವಾಲ್ಡ್ ಬ್ರೆವಿಸ್
ICC Rankings: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್, ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. 101ನೇ ಸ್ಥಾನದಿಂದ 89 ಸ್ಥಾನಗಳ ಏರಿಕೆ ಕಂಡ ಬ್ರೆವಿಸ್, ಈ ಸರಣಿಯಲ್ಲಿ 180 ರನ್ ಗಳಿಸಿದ್ದರು. ಅವರ ಸ್ಫೋಟಕ ಬ್ಯಾಟಿಂಗ್ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದೆ.
Updated on: Aug 20, 2025 | 4:46 PM

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಫೋಟಕ ಶತಕದೊಂದಿಗೆ ಅತಿ ವೇಗದ ಅರ್ಧಶತಕ ಸಿಡಿಸಿದ್ದ ದಾಖಲೆ ನಿರ್ಮಿಸಿದ್ದ ದಕ್ಷಿಣ ಆಪ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮೊದಲು ಡೆವಾಲ್ಡ್ ಬ್ರೆವಿಸ್ ಅವರ ಶ್ರೇಯಾಂಕ 101 ಆಗಿತ್ತು. ಆದರೆ ಈಗ ಅವರು ಬರೋಬ್ಬರಿ 89 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿದ್ದಾರೆ. ಅಂದರೆ ನೂತನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬ್ರೆವಿಸ್ 12 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬ್ರೆವಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದರು. ಆಡಿದ ಮೂರು ಪಂದ್ಯಗಳಲ್ಲಿ 90 ಸರಾಸರಿ ಮತ್ತು 204.55 ಸ್ಟ್ರೈಕ್ ರೇಟ್‌ನಲ್ಲಿ 180 ರನ್ ಕಲೆಹಾಕಿದ್ದರು. ಈ ಸರಣಿಯಲ್ಲಿ, ಅವರು ಒಂದು ಶತಕ ಮತ್ತು ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದ್ದರು.

ದಕ್ಷಿಣ ಆಫ್ರಿಕಾ ಈ ಟಿ20 ಸರಣಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಬ್ರೆವಿಸ್ ಅವರ ಆಟ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿತ್ತು. ಅದರಲ್ಲೂ ಅವರ ದೀರ್ಘ ಸಿಕ್ಸರ್ಗಳು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದವು. ಇದೀಗ ಬ್ರೆವಿಸ್ 12 ನೇ ಸ್ಥಾನಕ್ಕೇರಿದರೆ ಅವ ನಂತರ ರೀಜಾ ಹೆಂಡ್ರಿಕ್ಸ್ 15 ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಪುರುಷರ ಟಿ20 ಶ್ರೇಯಾಂಕದಲ್ಲಿ ಭಾರತದ ಅಭಿಷೇಕ್ ಶರ್ಮಾ 829 ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತದ ತಿಲಕ್ ವರ್ಮಾ 804 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ನಾಲ್ವರು ಆಟಗಾರರು ಟಾಪ್ 10 ಪಟ್ಟಿಯಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ 739 ರೇಟಿಂಗ್‌ನೊಂದಿಗೆ 6 ನೇ ಸ್ಥಾನದಲ್ಲಿದ್ದರೆ, ಯಶಸ್ವಿ ಜೈಸ್ವಾಲ್ 673 ರೇಟಿಂಗ್‌ನೊಂದಿಗೆ 10 ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಮೂರನೇ ಸ್ಥಾನದಲ್ಲಿದ್ದರೆ, ಅನುಭವಿ ಆಟಗಾರ ಜೋಸ್ ಬಟ್ಲರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 771 ರೇಟಿಂಗ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
