Australia: 1 ದೇಶ 21 ಐಸಿಸಿ ಟ್ರೋಫಿ: ಕ್ರಿಕೆಟ್ ಅಂಗಳದಲ್ಲಿ ಆಸ್ಟ್ರೇಲಿಯಾ ತಂಡದ್ದೇ ದರ್ಬಾರ್..!
TV9 Web | Updated By: ಝಾಹಿರ್ ಯೂಸುಫ್
Updated on:
Feb 27, 2023 | 7:22 PM
Australia Team: ಆಸ್ಟ್ರೇಲಿಯಾ ತಂಡವು ಕ್ರಿಕೆಟ್ ಅಂಗಳದಲ್ಲಿ ಗೆಲ್ಲದ ಮಹತ್ವದ ಟೂರ್ನಿಗಳಿಲ್ಲ ಎಂಬುದೇ ಇಲ್ಲಿ ಮತ್ತೊಂದು ವಿಶೇಷ. ಅಂದರೆ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ...ಎಲ್ಲವನ್ನೂ ಆಸ್ಟ್ರೇಲಿಯಾ ಪುರುಷ ಮತ್ತು ಮಹಿಳಾ ತಂಡಗಳು ಮುಡಿಗೇರಿಸಿಕೊಂಡಿದೆ.
1 / 9
ಆಸ್ಟ್ರೇಲಿಯಾ ಟೀಮ್...ಪ್ರಸ್ತುತ ಕ್ರಿಕೆಟ್ ಅಂಗಳವನ್ನು ಆಳುತ್ತಿರುವ ತಂಡ ಎಂದರೆ ತಪ್ಪಾಗಲಾರದು. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಮಹಿಳಾ ಕ್ರಿಕೆಟ್ ಇರಲಿ, ಪುರುಷರ ಕ್ರಿಕೆಟ್ ಆಗಿರಲಿ...ಅತ್ಯಧಿಕ ಐಸಿಸಿ ಟ್ರೋಫಿ ಗೆದ್ದಿರುವ ತಂಡ ಆಸ್ಟ್ರೇಲಿಯಾ.
2 / 9
ಆಸ್ಟ್ರೇಲಿಯಾ ತಂಡವು ಕ್ರಿಕೆಟ್ ಅಂಗಳದಲ್ಲಿ ಗೆಲ್ಲದ ಮಹತ್ವದ ಟೂರ್ನಿಗಳಿಲ್ಲ ಎಂಬುದೇ ಇಲ್ಲಿ ಮತ್ತೊಂದು ವಿಶೇಷ. ಅಂದರೆ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ...ಎಲ್ಲವನ್ನೂ ಆಸ್ಟ್ರೇಲಿಯಾ ಪುರುಷ ಮತ್ತು ಮಹಿಳಾ ತಂಡಗಳು ಮುಡಿಗೇರಿಸಿಕೊಂಡಿದೆ.
3 / 9
1978 ರಿಂದ ಶುರುವಾದ ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಬೇಟೆ ಇದೀಗ 2023 ಕ್ಕೆ ಬಂದು ನಿಂತಿದೆ. ಮಹಿಳಾ ಟಿ20 ವಿಶ್ವಕಪ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿ ಆಸೀಸ್ ಮಹಿಳೆಯರು 6ನೇ ಬಾರಿಗೆ ಕಿರೀಟವನ್ನು ತನ್ನದಾಗಿಸಿಕೊಂಡಿದೆ.
4 / 9
ವಿಶೇಷ ಎಂದರೆ ಕಳೆದ 45 ವರ್ಷಗಳಲ್ಲಿ ನಡೆದ ವಿಶ್ವಕಪ್ ಹಾಗೂ ಇತರೆ ಐಸಿಸಿ ಟೂರ್ನಿಗಳಲ್ಲಿ 21 ಬಾರಿ ಆಸ್ಟ್ರೇಲಿಯಾ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ನಡುವೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 5 ಐಸಿಸಿ ಟ್ರೋಫಿಗಳನ್ನು ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ. ಭಾರತ ತಂಡವು ಇದುವರೆಗೆ 3 ವಿಶ್ವಕಪ್ ಹಾಗೂ 2 ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ.
5 / 9
1978 ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಇದಾದ ಬಳಿಕ 1982, 1988, 1997, 2005, 2013 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದರ ನಡುವೆ ಆಸೀಸ್ ಮಹಿಳಾ ತಂಡವು ವಿಶ್ವಕಪ್ ಗೆಲ್ಲುವಲ್ಲಿ ಎಡವಿದರೂ, 2022 ರಲ್ಲಿ ಮೆಗ್ ಲ್ಯಾನಿಂಗ್ ನಾಯಕತ್ವದಲ್ಲಿ ಮತ್ತೆ ವಿಶ್ವ ಕಿರೀಟವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂದರೆ ಆಸ್ಟ್ರೇಲಿಯಾ ಮಹಿಳಾ ತಂಡವು ಇದುವರೆಗೆ 7 ಏಕದಿನ ವಿಶ್ವಕಪ್ಗಳನ್ನು ಗೆದ್ದುಕೊಂಡಿದೆ.
6 / 9
ಇದರ ನಡುವೆ ಆಸ್ಟ್ರೇಲಿಯಾ ಪುರುಷರ ತಂಡವು 1987 ರ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಹೊಸ ಅಭಿಯಾನ ಆರಂಭಿಸಿತ್ತು. ಇದಾದ ಬಳಿಕ 2ನೇ ವಿಶ್ವಕಪ್ ಗೆಲ್ಲಲು ಆಸೀಸ್ ಪಡೆ 12 ವರ್ಷಗಳನ್ನೇ ಕಾಯಬೇಕಾಯಿತು. 1999 ರ ವಿಶ್ವಕಪ್ ಗೆಲುವಿನ ಬಳಿಕ 2003, 2007 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಹ್ಯಾಟ್ರಿಕ್ ಸಾಧನೆ ಮಾಡಿತು. ಇನ್ನು ಆಸ್ಟ್ರೇಲಿಯಾ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿರುವುದು 2015 ರಲ್ಲಿ. ಅದರಂತೆ ಆಸ್ಟ್ರೇಲಿಯಾ ಪುರುಷರ ತಂಡ ಒಟ್ಟು 5 ಏಕದಿನ ವಿಶ್ವಕಪ್ಗಳನ್ನು ಗೆದ್ದುಕೊಂಡಿದೆ.
7 / 9
ಇನ್ನು ಮಹಿಳಾ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವನಿತೆಯರದ್ದೇ ಪಾರುಪತ್ಯ. 2010, 2012, 2014, 2018, 2020 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆಸ್ಟ್ರೇಲಿಯಾ ತಂಡವು ಇದೀಗ 2023ರ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಮೂಲಕ 6ನೇ ಬಾರಿ ಮಹಿಳಾ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
8 / 9
ಮತ್ತೊಂದೆಡೆ ಟಿ20 ವಿಶ್ವಕಪ್ನಲ್ಲಿ ಪುರುಷರ ತಂಡ ಹಿಂದೆ ಉಳಿದಿದೆ ಎಂದೇ ಹೇಳಬಹುದು. ಏಕೆಂದರೆ ಕಳೆದ 15 ವರ್ಷಗಳಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವು 2021 ರಲ್ಲಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.
9 / 9
ಇದರ ಹೊರತಾಗಿ ಆಸ್ಟ್ರೇಲಿಯಾ ತಂಡವು 2006 ಮತ್ತು 2009 ರಲ್ಲಿ ಚಾಂಪಿಯನ್ ಟ್ರೋಫಿಯನ್ನು ಕೂಡ ಗೆದ್ದುಕೊಂಡಿತ್ತು. ಅಂದರೆ ಕಳೆದ 45 ವರ್ಷಗಳಲ್ಲಿ ನಡೆದ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡವೇ 21 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ವಿಶೇಷ.