- Kannada News Photo gallery Cricket photos Kane Williamson scripts history, New Zealand's Highest Test Run-Scorer
Kane Williamson: ಭರ್ಜರಿ ಶತಕದೊಂದಿಗೆ ಹೊಸ ದಾಖಲೆ ಬರೆದ ಕೇನ್ ವಿಲಿಯಮ್ಸನ್
Kane Williamson Records: ಕೇನ್ ವಿಲಿಯಮ್ಸನ್ ಅವರ ಈ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 483 ರನ್ ಕಲೆಹಾಕಿದೆ. ವಿಶೇಷ ಎಂದರೆ ಈ ಸೆಂಚುರಿಯೊಂದಿಗೆ ನ್ಯೂಜಿಲೆಂಡ್ ಪರ ಹೊಸ ದಾಖಲೆಯನ್ನು ಕೂಡ ಕೇನ್ ವಿಲಿಯಮ್ಸನ್ ನಿರ್ಮಿಸಿದರು.
Updated on: Feb 27, 2023 | 6:08 PM

ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ದ್ವಿತೀಯ ಇನಿಂಗ್ಸ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ 282 ಎಸೆತಗಳಲ್ಲಿ 132 ರನ್ ಬಾರಿಸಿದರು.

ಕೇನ್ ವಿಲಿಯಮ್ಸನ್ ಅವರ ಈ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 483 ರನ್ ಕಲೆಹಾಕಿದೆ. ವಿಶೇಷ ಎಂದರೆ ಈ ಸೆಂಚುರಿಯೊಂದಿಗೆ ನ್ಯೂಜಿಲೆಂಡ್ ಪರ ಹೊಸ ದಾಖಲೆಯನ್ನು ಕೂಡ ಕೇನ್ ವಿಲಿಯಮ್ಸನ್ ನಿರ್ಮಿಸಿದರು.

ಹೌದು, ಇಂಗ್ಲೆಂಡ್ ವಿರುದ್ಧದ ಈ ಶತಕದೊಂದಿಗೆ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೇನ್ ವಿಲಿಯಮ್ಸನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಾಸ್ ಟೇಲರ್ ಹೆಸರಿನಲ್ಲಿತ್ತು.

ನ್ಯೂಜಿಲೆಂಡ್ ಪರ 112 ಟೆಸ್ಟ್ ಪಂದ್ಯಗಳಲ್ಲಿ 196 ಇನಿಂಗ್ಸ್ ಆಡಿದ್ದ ರಾಸ್ ಟೇಲರ್ 3 ದ್ವಿಶತಕ, 19 ಶತಕ ಹಾಗೂ 35 ಅರ್ಧಶತಕಗಳೊಂದಿಗೆ ಒಟ್ಟು 7684 ರನ್ ಕಲೆಹಾಕಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಕೇನ್ ವಿಲಿಯಮ್ಸನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

92 ಟೆಸ್ಟ್ ಪಂದ್ಯಗಳಲ್ಲಿ 161 ಇನಿಂಗ್ಸ್ ಆಡಿರುವ ಕೇನ್ ವಿಲಿಯಮ್ಸನ್ 5 ದ್ವಿಶತಕ, 26 ಶತಕ ಹಾಗೂ 33 ಅರ್ಧಶತಕದೊಂದಿಗೆ ಒಟ್ಟು 7787 ರನ್ ಕಲೆಹಾಕಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶೇಷ ಎಂದರೆ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ 7 ಸಾವಿರಕ್ಕೂ ಅಧಿಕ ರನ್ಗಳಿಸಿರುವುದು ಕೇವಲ ಮೂವರು ಬ್ಯಾಟರ್ಗಳು ಮಾತ್ರ. ಅದರಲ್ಲಿ ಕೇನ್ ವಿಲಿಯಮ್ಸನ್ ಈಗ ಅಗ್ರಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ರಾಸ್ ಟೇಲರ್ ಇದ್ದಾರೆ.

ಇನ್ನು 111 ಟೆಸ್ಟ್ ಪಂದ್ಯಗಳ 189 ಇನಿಂಗ್ಸ್ನಲ್ಲಿ 7172 ಕಲೆಹಾಕಿರುವ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಕಿವೀಸ್ ತಂಡದ ಮತ್ಯಾವ ಬ್ಯಾಟರ್ ಟೆಸ್ಟ್ ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿಲ್ಲ ಎಂಬುದೇ ವಿಶೇಷ.
