ಕಳೆದ ಒಂದು ವರ್ಷದಿಂದ ತಂಡದ ಹಲವು ಆಟಗಾರರ ಗಾಯದಿಂದ ಕಂಗೆಟ್ಟಿರುವ ಭಾರತ ಕ್ರಿಕೆಟ್ ತಂಡದ ತಲೆನೋವು ಇನ್ನಷ್ಟು ಹೆಚ್ಚಾಗಲಿದೆ. ಟೀಂ ಇಂಡಿಯಾ ಮಾತ್ರವಲ್ಲ, ಐಪಿಎಲ್ 2023 ರ ಸೀಸನ್ ಪ್ರಾರಂಭವಾಗುವ ಮೊದಲು, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ನ ಟೆನ್ಷನ್ ಕೂಡ ಹೆಚ್ಚಾಗಲಿದೆ. ಇದಕ್ಕೆ ಕಾರಣ- ಜಸ್ಪ್ರೀತ್ ಬುಮ್ರಾ.
ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ 7 ತಿಂಗಳಿಂದ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದು, ಅವರು ಇಂಜುರಿಯಿಂದ ಚೇತರಿಸಿಕೊಳ್ಳುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ.
ಇದೆಲ್ಲದರ ನಡುವೆ ಈಗ ಕ್ರಿಕ್‌ಬಜ್ ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಅವರು ಸಂಪೂರ್ಣ ಫಿಟ್ ಆಗಿ, ಮೈದಾನಕ್ಕೆ ಮರಳಲು ಇನ್ನು ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಬಿಸಿಸಿಐ ಮೂಲಗಳ ಪ್ರಕಾರ ಬುಮ್ರಾ 16ನೇ ಆವೃತ್ತಿಯ ಐಪಿಎಲ್ನಿಂದಲೂ ಹೊರಬೀಳಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ನಂತರ ಬುಮ್ರಾ ಅವರಿಗೆ ಈ ಇಂಜುರಿ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಅವರು ಏಷ್ಯಾಕಪ್‌ನಲ್ಲಿಯೂ ಆಡಲು ಸಾಧ್ಯವಾಗಲಿಲ್ಲ. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ತಂಡಕ್ಕೆ ಪುನರಾಗಮನ ಮಾಡಿದ ಬುಮ್ರಾ, ಕೇವಲ ಎರಡು ಪಂದ್ಯಗಳನ್ನು ಆಡಿದ ನಂತರ ಮತ್ತೊಮ್ಮೆ ಗಾಯಗೊಂಡರು. ಹೀಗಾಗಿ ಬುಮ್ರಾಗೆ 2022ರ ಟಿ20 ವಿಶ್ವಕಪ್ 2022 ನಲ್ಲಿಯೂ ಆಡಲು ಸಾಧ್ಯವಾಗಲಿಲ್ಲ.
ನಂತರ ಬುಮ್ರಾ ಅವರನ್ನು ಜನವರಿ 2023 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಯಿತು. ಆದರೆ ಸರಣಿಯ ಆರಂಭದ ಒಂದು ದಿನದ ಮೊದಲು ಅವರನ್ನು ತಂಡದಿಂದ ಕೈಬಿಡಲಾಯಿತು. ಇದರ ನಂತರ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಕೂಡ ಸಂಭವಿಸಲಿಲ್ಲ. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಅವರನ್ನು ಆಯ್ಕೆ ಮಾಡಲಾಗಿಲ್ಲ.
ಇದೆಲ್ಲದರ ನಂತರ, ಮಾರ್ಚ್ 31 ರಿಂದ ಪ್ರಾರಂಭವಾಗುವ 16ನೇ ಆವೃತ್ತಿ ಐಪಿಎಲ್ನಲ್ಲಿ ಬುಮ್ರಾ, ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಈಗ ಅದು ಕೂಡ ಕಷ್ಟ ಎಂದು ಹೇಳಲಾಗುತ್ತಿದೆ.
ಬುಮ್ರಾ ಐಪಿಎಲ್ ಮಾತ್ರವಲ್ಲದೆ, ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಸಾಧ್ಯತೆಗಳು ತೀರ ಕ್ಷೀಣವಾಗಿವೆ.
ಬುಮ್ರಾ ಕಳೆದ ಹಲವು ವಾರಗಳಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ಎನ್‌ಸಿಎಯಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲೂ ಬುಮ್ರಾ ಬೌಲಿಂಗ್ ಮಾಡುತ್ತಿದ್ದರು. ವರದಿಯ ಪ್ರಕಾರ, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಬುಮ್ರಾ ಅವರನ್ನು ಸಿದ್ಧಪಡಿಸುವುದು ಈಗ ಬಿಸಿಸಿಐ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮತ್ತು ಎನ್‌ಸಿಎ ಗುರಿಯಾಗಿದೆ. ಹೀಗಾಗಿ ಅವರು ಐಪಿಎಲ್, ಡಬ್ಲ್ಯುಟಿಸಿ ಫೈನಲ್ ಮತ್ತು ಏಷ್ಯಾ ಕಪ್‌ನಿಂದ ಹೊರಗುಳಿಯುವ ಸಾಧ್ಯತೆಗಳು ದಟ್ಟವಾಗಿವೆ.
Published On - 10:43 am, Mon, 27 February 23