6,6,6,6: ಸಿಡಿಲಬ್ಬರದ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದ ಆಝಂ
Azam Khan: ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಯೀನ್ ಖಾನ್ ಅವರ ಪುತ್ರ. ಇದೀಗ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವ ಬಲಗೈ ಬ್ಯಾಟರ್ ಆಝಂ ಸ್ಪೋಟಕ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಕೀರನ್ ಪೊಲಾರ್ಡ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on: Feb 04, 2024 | 12:04 PM

ದುಬೈನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಪಾಕ್ ಕ್ರಿಕೆಟಿಗ ಆಝಂ ಖಾನ್ (Azam Khan) ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಸರ್ಟ್ ವೈಪರ್ಸ್ ತಂಡವು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಗಲ್ಫ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತು.

ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಡೆಸರ್ಟ್ ವೈಪರ್ಸ್ ತಂಡಕ್ಕೆ ಅಲೆಕ್ಸ್ ಹೇಲ್ಸ್ (44) ಹಾಗೂ ಕಾಲಿನ್ ಮನ್ರೊ (51) ಉತ್ತಮ ಆರಂಭ ಒದಗಿಸಿದ್ದರು. ಇದಾದ ಬಳಿಕ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಝಂ ಖಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಆಝಂ ಖಾನ್ ಗಲ್ಫ್ ಜೈಂಟ್ಸ್ ಬೌಲರ್ಗಳನ್ನು ಚೆಂಡಾಡಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು. ಈ ಸಿಕ್ಸ್-ಫೋರ್ಗಳೊಂದಿಗೆ ಕೇವಲ 18 ಎಸೆತಗಳಲ್ಲಿ ಆಝಂ ಖಾನ್ ಅರ್ಧಶತಕ ಪೂರೈಸಿದರು.

ಇದರೊಂದಿಗೆ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಆಝಂ ಖಾನ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಕೀರನ್ ಪೊಲಾರ್ಡ್ ಹೆಸರಿನಲ್ಲಿತ್ತು. ಪೊಲಾರ್ಡ್ 2023 ರಲ್ಲಿ ಡೆಸರ್ಟ್ ವೈಪರ್ಸ್ ವಿರುದ್ಧ ಕೇವಲ 19 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು.

ಇದೀಗ ಗಲ್ಫ್ ಜೈಂಟ್ಸ್ ವಿರುದ್ಧ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಆಝಂ ಖಾನ್ ಹೊಸ ಇತಿಹಾಸ ಬರೆದಿದ್ದಾರೆ. ಇನ್ನು 20 ಎಸೆತಗಳನ್ನು ಎದುರಿಸಿದ ಆಝಂ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 50 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ 16.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಡೆಸರ್ಟ್ ವೈಪರ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.




