Babar Azam: ಬಾಬರ್ ಆಝಂ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆ
Babar Azam Record: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿರುವ ಬಾಬರ್ ಆಝಂ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಪಿಎಸ್ಎಲ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ಎಂಬುದು ವಿಶೇಷ. ಹಾಗಿದ್ರೆ ಬಾಬರ್ ಹೆಸರಿಗೆ ಸೇರ್ಪಡೆಯಾಗಿರುವ ಹೊಸ ದಾಖಲೆ ಯಾವುದೆಂದು ತಿಳಿಯೋಣ.
Updated on: Feb 19, 2024 | 9:31 AM

ಪಾಕಿಸ್ತಾನ್ ಸೂಪರ್ ಲೀಗ್ನ (PSL 2024) 2ನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಬಾಬರ್ ಆಝಂ (Babar Azam) ವಿಶೇಷ ದಾಖಲೆ ಬರೆದಿದ್ದಾರೆ. ಲಾಹೋರ್ನ ಗದ್ದಾಫಿ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಪೇಶಾವರ್ ಝಲ್ಮಿ ಪರ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ಬ ಆಝಂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 42 ಎಸೆತಗಳನ್ನು ಎದುರಿಸಿದ ಬಾಬರ್ 4 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 68 ರನ್ ಬಾರಿಸಿದರು.

ಈ ಅರ್ಧಶತಕದೊಂದಿಗೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ 3 ಸಾವಿರ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಬಾಬರ್ ಆಝಂ ಪಾತ್ರರಾದರು. ಬಾಬರ್ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟರ್ ಪಿಎಸ್ಎಲ್ನಲ್ಲಿ 2500+ ರನ್ ಕಲೆಹಾಕಿಲ್ಲ ಎಂಬುದು ವಿಶೇಷ.

ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಇದುವರೆಗೆ 78 ಇನಿಂಗ್ಸ್ ಆಡಿರುವ ಬಾಬರ್ ಆಝಂ 3003 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 29 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಪಿಎಸ್ಎಲ್ನ ಟಾಪ್ ರನ್ ಸರದಾರನಾಗಿ ಬಾಬರ್ ಆಝಂ ಗುರುತಿಸಿಕೊಂಡಿದ್ದಾರೆ.

ಇನ್ನು ಬಾಬರ್ ಆಝಂ ಅವರ ಈ ಅರ್ಧಶತಕದ ಹೊರತಾಗಿಯೂ ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಸೋಲುಂಡಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ನೀಡಿದ 207 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಪೇಶಾವರ್ ಝಲ್ಮಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು. ಈ ಮೂಲಕ 16 ರನ್ಗಳಿಂದ ಸೋಲೊಪ್ಪಿಕೊಂಡಿತು.
