
ಇಂಗ್ಲೆಂಡ್ ಪ್ರವಾಸ ಪಾಕಿಸ್ತಾನ ಟೆಸ್ಟ್ ನಾಯಕ ಬಾಬರ್ ಆಝಂ ದುಃಸ್ವಪ್ನದಂತೆ ಕಾಡುತ್ತಿದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಂದು ಪಾಕಿಸ್ತಾನದ ಬ್ಯಾಟಿಂಗ್ ಮತ್ತೊಮ್ಮೆ ವಿಫಲವಾತಯಿತು. ಪರಿಣಾಮವಾಗಿ ಇಡೀ ತಂಡ ಕೇವಲ 133 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಬಾಬರ್ ಆಝಂ ಕೂಡ ಕೇವಲ 7 ರನ್ಗೆ ಔಟಾಗುವ ಮೂಲಕ ತಂಡದ ಪತನಕ್ಕೆ ಕಾರಣರಾದರು.
ವಾಸ್ತವವಾಗಿ ಬಾಬರ್ ಆಝಂ ಸತತ ಮೂರನೇ ಇನ್ನಿಂಗ್ಸ್ನಲ್ಲಿ ಒಂದಂಕಿ ಗಡಿ ದಾಟುವಲ್ಲಿ ವಿಫಲರಾದರು. ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಬರ್ ಆಝಂ ಆಡಿರಲಿಲ್ಲ. ಆ ಪಂದ್ಯದಲ್ಲೂ ತಂಡ ಸೋತಿತು. ಎರಡನೇ ಪಂದ್ಯದಲ್ಲಿ ತಂಡಕ್ಕೆ ಮರಳಿದ ಬಾಬರ್, ಆ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 8 ರನ್ ಬಾರಿಸಿದ್ದ ಬಾಬರ್, 2ನೇ ಇನ್ನಿಂಗ್ಸ್ನಲ್ಲಿ ಕೇವಲ 7 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು.
ಬಾಬರ್ ಆಗಮನದ ಹೊರತಾಗಿಯೂ ಪಾಕಿಸ್ತಾನ ತಂಡ ಎರಡನೇ ಟೆಸ್ಟ್‌ನಲ್ಲೂ 194 ರನ್ಗಳ ಹೀನಾಯ ಸೋಲು ಅನುಭವಿಸಿತ್ತು. ಇದೀಗ ಮೂರನೇ ಟೆಸ್ಟ್‌ನಲ್ಲೂ ಪಾಕ್ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ. ಈ ಇಡೀ ಸರಣಿಯಲ್ಲಿ ಪಾಕ್ ತಂಡ 200 ರನ್ಗಳ ಗಡಿ ದಾಟಿಲ್ಲ. ಪಾಕ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಎಲ್ಲಾ ವಿಭಾಗದಲ್ಲೂ ವಿಫಲವಾಗಿದೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬಂದ ಬಾಬರ್ ಆಝಂ 18 ಎಸೆತಗಳನ್ನು ಎದುರಿಸಿ ಕೇವಲ ಏಳು ರನ್ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ ಒಂದು ಬೌಂಡರಿ ಬಾರಿಸಲಷ್ಟೇ ಶಕ್ತರಾದ ಬಾಬರ್, ಜೋಶ್ ಟಂಗ್ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಸರಣಿಯಲ್ಲಿ ಈಗಾಗಲೇ 2-0 ಹಿನ್ನಡೆಯಲ್ಲಿರುವ ಪಾಕಿಸ್ತಾನ ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಲು ಪ್ರಯತ್ನಿಸುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಮೂರನೇ ಟೆಸ್ಟ್‌ನಲ್ಲೂ ಪಾಕ್ ತಂಡದ ಪ್ರದರ್ಶನ ಬದಲಾಗಲಿಲ್ಲ. ಈ ಪಂದ್ಯಕ್ಕಾಗಿ ಪಾಕ್ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿದೆಯಾದರೂ ಯಾರ ಪ್ರದರ್ಶನವೂ ಉತ್ತಮವಾಗಿಲ್ಲ.