
ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ತವರಿನಲ್ಲಿ ಪಾಕ್ ಪಡೆಯನ್ನು 10 ವಿಕೆಟ್ಗಳಿಂದ ಮಣಿಸಿ ಮೊದಲ ತಂಡ ಎಂಬ ದಾಖಲೆಯನ್ನು ಬಾಂಗ್ಲಾದೇಶ್ ತಂಡ ತನ್ನದಾಗಿಸಿಕೊಂಡಿದೆ. ಇತ್ತ ಹೀನಾಯ ಸೋಲಿನೊಂದಿಗೆ ಪಾಕ್ ಪಡೆ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಅಂದರೆ 1952 ರಿಂದ ತವರಿನಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿರುವ ಪಾಕಿಸ್ತಾನವನ್ನು ಯಾವುದೇ ತಂಡ 10 ವಿಕೆಟ್ಗಳಿಂದ ಸೋಲಿಸಿಲ್ಲ. ತವರಿನಲ್ಲಿ ಒಟ್ಟು 170 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ತಂಡವು 62 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು ಸೋತಿರುವುದು 29 ಪಂದ್ಯಗಳಲ್ಲಿ ಮಾತ್ರ. ಹಾಗೆಯೇ 79 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ತವರಿನಲ್ಲಿ ಪಾಕಿಸ್ತಾನ್ ತಂಡವು 29 ಪಂದ್ಯಗಳಲ್ಲಿ ಸೋತರೂ ಒಮ್ಮೆಯೂ 10 ವಿಕೆಟ್ಗಳ ಪರಾಜಯ ಅನುಭವಿಸಿರಲಿಲ್ಲ ಎಂಬುದು ವಿಶೇಷ. ಆದರೆ ಈ ಬಾರಿ ಈ ದಾಖಲೆಗೆ ಬ್ರೇಕ್ ಹಾಕುವಲ್ಲಿ ಬಾಂಗ್ಲಾ ಪಡೆ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ್ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿ ಬಾಂಗ್ಲಾದೇಶ್ ಐತಿಹಾಸಿಕ ಸಾಧನೆ ಮಾಡಿದೆ.

ವಿಶೇಷ ಎಂದರೆ ಪಾಕಿಸ್ತಾನ್ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು 3 ವರ್ಷಗಳೇ ಕಳೆದಿವೆ. 2021 ರಲ್ಲಿ ಕೊನೆಯ ಬಾರಿಗೆ ಬಾಂಗ್ಲಾದೇಶ್ ವಿರುದ್ಧ ಪಾಕ್ ಪಡೆ ತವರಿನಲ್ಲಿ ಸರಣಿ ಜಯಸಿತ್ತು. ಇದಾದ ಬಳಿಕ 9 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ಒಮ್ಮೆಯೂ ಗೆಲುವಿನ ರುಚಿ ನೋಡಿಲ್ಲ ಎಂಬುದು ವಿಶೇಷ.

1,294 ದಿನಗಳಿಂದ ಸೋಲಿನ ಸುಳಿಯಲ್ಲಿರುವ ಪಾಕಿಸ್ತಾನ್ ತಂಡಕ್ಕೆ ಈ ಬಾರಿ ಬಾಂಗ್ಲಾದೇಶ್ ತಂಡ ಕೂಡ ಬಿಗ್ ಶಾಕ್ ನೀಡಿದೆ. ಅದು ಸಹ 10 ವಿಕೆಟ್ಗಳ ಭರ್ಜರಿ ಗೆಲುವಿನ ಮೂಲಕ ಎಂಬುದು ವಿಶೇಷ. ಈ ಹೀನಾಯ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದೆ.