ಏಷ್ಯಾಕಪ್ ಸನಿಹವಾಗುತ್ತಿದ್ದಂತೆ ಬಾಂಗ್ಲಾದೇಶ ತಂಡದ ಸಂಕಷ್ಟಗಳು ಹೆಚ್ಚಾಗುತ್ತಿವೆ. ತಿಂಗಳ ಹಿಂದೆ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ತಮೀಮ್ ಇಕ್ಬಾಲ್, ವೃತ್ತಿಜೀವನಕ್ಕೆ ಹಠಾತ್ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಪ್ರಧಾನಿಯವರ ಆದೇಶದ ಮೇರೆಗೆ ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ್ದರು.
ತಮೀಮ್ ನಾಯಕತ್ವದಿಂದ ಕೆಳಗಿಳಿದಿದ್ದರಿಂದ ಶಾಕಿಬ್ ಅಲ್ ಹಸನ್ಗೆ ಏಕದಿನ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಆ ಬಳಿಕ ಇಂಜುರಿಯಿಂದ ಬಳಲುತ್ತಿದ್ದ ಮಾಜಿ ನಾಯಕ ತಮೀಮ್ ಇಕ್ಬಾಲ್ ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದರು. ನಂತರ ಬಾಂಗ್ಲಾ ಮಂಡಳಿ 17 ಸದಸ್ಯರ ತಂಡವನ್ನು ಏಷ್ಯಾಕಪ್‌ಗೆ ಪ್ರಕಟಿಸಿತ್ತು.
ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ತಂಡದ ಸ್ಟಾರ್ ವೇಗದ ಬೌಲರ್ ಇಬಾದತ್ ಹುಸೈನ್ ಮೊಣಕಾಲಿನ ಗಾಯದ ಕಾರಣದಿಂದ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಇಬಾದತ್ ಇಂಜುರಿಗೆ ತುತ್ತಾಗಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಬಾಂಗ್ಲಾ ಮಂಡಳಿ, ಇಂಜುರಿಯಿಂದ ಬಳಲುತ್ತಿರುವ ಇಬಾದತ್ ಹುಸೈನ್, ಆರು ವಾರಗಳ ರಿಹ್ಯಾಬ್ನಲ್ಲಿರಲ್ಲಿದ್ದಾರೆ. ಎಲ್ಲ ಪರೀಕ್ಷೆಗಳ ನಂತರ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ತಿಳಿದುಬಂದಿದೆ. ಹೀಗಾಗಿ ಅವರ ಸ್ಥಾನಕ್ಕೆ ತಂಜಿಮ್ ಹಸನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
ಅಕ್ಟೋಬರ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ವೇಳೆಗೆ ಇಬಾದತ್ ಹುಸೈನ್ ಪೂರ್ಣ ಫಿಟ್ ಆಗುವ ಸಾಧ್ಯತೆ ಇದೆ ಎಂದು ಬಿಸಿಬಿ ತಿಳಿಸಿದ್ದಾರೆ.
ಏಷ್ಯಾಕಪ್‌ಗೆ ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್ ಧ್ರುಬೊ, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್, ಮಹೇದಿ ಹಸನ್, ನಯಿಮ್ ಶೇಖ್, ಶಮೀಮ್ ಹೊಸೈನ್, ತಂಝಿದ್ ಹಸನ್ ತಮೀಮ್, ತಂಝಿಮ್ ಹಸನ್ ಸಾಕಿಬ್.